ಜಿಲ್ಲೆ

‘ಮೈಸೂರಿನ ಗಾಂಧಿ’ ಎಚ್.ಸಿ.ದಾಸಪ್ಪ ವಿಚಾರಧಾರೆ ಜನರಿಗೆ ತಲುಪಲಿ

ಮೈಸೂರು: ‘ಮೈಸೂರಿನ ಗಾಂಧಿ’ ಎಂದು ಹೆಸರುವಾಸಿಯಾಗಿರುವ ಎಚ್.ಸಿ.ದಾಸಪ್ಪ ಅವರ ವಿಚಾರಧಾರೆಯನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕು ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.


ಎಚ್.ಸಿ.ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆ ವತಿಯಿಂದ ನಗರದ ಗಂಗೋತ್ರಿ ಬಡಾವಣೆಯ ಮಾರುತಿ ದೇವಸ್ಥಾನದ ರಸ್ತೆಯಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ‘ಎಚ್.ಸಿ.ದಾಸಪ್ಪ ಭವನ’ ಕಟ್ಟಡಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ದಾಸಪ್ಪನವರು ಅಪ್ಪಟ ಗಾಂಧಿವಾದಿ. ಮಹಾತ್ಮ ಗಾಂಧೀಜಿ ಅವರ ತತ್ವಾದರ್ಶವನ್ನು ಮೈಗೂಡಿಸಿಕೊಂಡಿದ್ದರು. ಜವಾಹರಲಾಲ್ ನೆಹರು ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ನೇರವಾಗಿ ಸಲಹೆಗಳನ್ನು ನೀಡುವ ಆಪ್ತ ವಲಯದಲ್ಲಿದ್ದರು. ಮೈಸೂರು ರಾಜ್ಯ ಸರ್ಕಾರದಲ್ಲಿ ಮೊದಲ ಹಣಕಾಸು, ಕೈಗಾರಿಕಾ ಸಚಿವರಾಗಿ, ನೆಹರು ಸಚಿವ ಸಂಪುಟದಲ್ಲಿ ರೈಲ್ವೆ ಸಚಿವರಾಗಿ, ಲಾಲ್‌ಬಹಾದ್ದೂರ್ ಶಾಸ್ತ್ರಿ ಸಂಪುಟದಲ್ಲಿ ನೀರಾವರಿ, ಕೈಗಾರಿಕಾ ಸಚಿವರಾಗಿ ಕಾರ್ಯನಿರ್ವಹಿಸಿದ್ದರು ಎಂದು ಸ್ಮರಿಸಿದರು.


ದಾಸಪ್ಪ ಪತ್ನಿ ಯಶೋದರಾ ಅವರು 1962ರಲ್ಲಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದರು. ಈ ಸಂದರ್ಭದಲ್ಲಿ ಮದ್ಯಪಾನ ನಿಷೇಧ ಕಾನೂನು ಜಾರಿಗೆ ಒತ್ತಾಯಿಸಿದ್ದರು. ಇದು ಜಾರಿಯಾಗದ ಕಾರಣ ಬೇಸರಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದು ಹೇಳಿದರು.


ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಎಚ್.ಸಿ.ದಾಸಪ್ಪ ಅವರ ಮೂರು ತಲೆಮಾರು ಸಾರ್ವಜನಿಕ ಸೇವೆ ಮಾಡಿದೆ. ದಾಸಪ್ಪ ಅವರ ತಂದೆ ನ್ಯಾಯಾಧೀಶ ಸಾಹುಕಾರ್ ಎಚ್.ಚನ್ನಯ್ಯ ಅವರು ಹಿಂದುಳಿದ ವರ್ಗಕ್ಕೆ ಮೀಸಲಾತಿ ನೀಡುವ ಮೂಲಕ ಕ್ರಾಂತಿಕಾರಕ ತೀರ್ಮಾನ ತೆಗೆದುಕೊಂಡಿದ್ದರು. ಅವರ ಪುತ್ರ ದಾಸಪ್ಪ, ಯಶೋದರ ದಾಸಪ್ಪ ದಂಪತಿ ರಾಜಕೀಯ ಕ್ಷೇತ್ರದಲ್ಲಿದ್ದು, ಜನಪರ ಕೆಲಸ ಮಾಡಿದರು. ಅದನ್ನು ದಾಸಪ್ಪ ಅವರ ಪುತ್ರ ಎಚ್.ಡಿ.ತುಳಸಿದಾಸಪ್ಪ ಸಂಸದರಾಗಿ ಸಾರ್ವಜನಿಕ ಕೆಲಸವನ್ನು ಮುಂದುವರಿಸಿದ್ದರು ಎಂದು ಹೇಳಿದರು.


ಸಂಸ್ಥೆಯ ಉಪಾಧ್ಯಕ್ಷ ಜಿ.ಬಿ.ಶಿವರಾಜು, ಕಾರ್ಯದರ್ಶಿ ಸರೋಜಾ ತುಳಸಿದಾಸ್, ಖಜಾಂಚಿ ಪಿ. ವಿಶ್ವನಾಥ್, ಸದಸ್ಯರಾದ ಪಿ. ಬೊರೇಗೌಡ, ಕೆಂಪರಾಜೇಗೌಡ, ವೇದಾವತಿ ಇನ್ನಿತರರಿದ್ದರು.