ದೊಡ್ಡಬಳ್ಳಾಪುರದಲ್ಲಿನ ಭಗತ್‌ಸಿಂಗ್ ವ್ಯಾಯಾಮ ಶಾಲೆ  
ಜಿಲ್ಲೆ

ವ್ಯಾಯಾಮ ಶಾಲೆಗಳ ನಿರ್ವಹಣೆ ಕೊರತೆ

ಶಿವರಾಜ.ಎಂ

ಹಾಳಾದ ಪರಿಕರಗಳ ಬಳಕೆ

ಅನುದಾನ ನೀಡಲು ಕೇಂದ್ರ ಕಚೇರಿಯಿಂದ ಮೀನಮೇಷ


ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಸಾರ್ವಜನಿಕರು ಹಾಗೂ ಕ್ರೀಡಾಪಟುಗಳ ಸಧೃಢ ದೇಹ, ಆರೋಗ್ಯ ರಕ್ಷಣೆಗಾಗಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಆರಂಭಿಸಿರುವ ವ್ಯಾಯಾಮ ಶಾಲೆಗಳು ನಿರ್ವಹಣೆ ಕೊರತೆ ಎದುರಿಸುತ್ತಿವೆ.!
ಹೊಸಕೋಟೆ ತಾಲೂಕಿನಲ್ಲಿ ಗುತ್ತಿಗೆ ಆಧಾರದಲ್ಲಿ ನಿರ್ವಹಣೆಯಾಗುತ್ತಿರುವ ವ್ಯಾಯಾಮ ಶಾಲೆ (ಜಿಮ್) ಹೊರತುಪಡಿಸಿದರೆ ದೊಡ್ಡಬಳ್ಳಾಪುರ, ನೆಲಮಂಗಲ ಹಾಗೂ ದೇವನಹಳ್ಳಿ ತಾಲೂಕಿನಲ್ಲಿನ ವ್ಯಾಯಾಮ ಶಾಲೆಗಳು ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿವೆ, ಜಿಮ್‌ಗೆ ಬರುವವರಿಗೆ ಬೇಸರ ಮೂಡಿಸುವ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ಷೇಪ ಕೇಳಿಬರುತ್ತಿದೆ.
ಅಪಾಯಕಾರಿ ಎಚ್ಚರಿಕೆ: ಇಲ್ಲಿನ ವ್ಯಾಯಾಮ ಪರಿಕರಗಳ ನಿರ್ವಹಣೆ (ಸರ್ವಿಸ್) ಕಡೆಗಣಿಸಲಾಗಿದೆ. ಟ್ರೇಡ್‌ಮಿಲ್, ಸೈಕಲ್ ಸೇರಿ ಇನ್ನಿತರ ಪರಿಕರಗಳ ಸರ್ವಿಸ್ ಮಾಡಿ ವರ್ಷಗಳೇ ಕಳೆದುಹೋಗಿವೆ. ಟ್ರೇಡ್‌ಮಿಲ್‌ನಲ್ಲಿನ ನೆಲಹಾಸು ಸವೆದುಹೋಗಿದ್ದು, ನಡೆಯಲೂ ಸಾಧ್ಯವಾಗದ ಪರಿಸ್ಥಿತಿ ಇದೆ. ಅಲ್ಲದೆ ಅಷ್ಟೇ ಅಪಾಯಕಾರಿಯಾಗಿದ್ದು, ದುರಾದೃಷ್ಟವಶಾತ್ ವ್ಯಾಯಾಮ ಮಾಡುವವರು ಗಾಯಗೊಳ್ಳುವ ಅಪಾಯವಿದೆ. ಕ್ರೀಡಾಪಟುಗಳು ಥ್ರಡ್‌ಮಿಲ್‌ನಲ್ಲಿ ಓಡುವಾಗ ತಕ್ಷಣ ಬೆಲ್ಟ್ ಮತ್ತಿತರ ಪರಿಕರ ಕೈಕೊಟ್ಟರೆ ಭಾರಿ ಅನಾಹುತ ಸಂಭವಿಸವ ಅಪಾಯವಿದೆ ಎಂದು ಕ್ರೀಡಾಪಟುಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಹಣ ಕೊಡಲ್ಲ ಅಂತಾರೆ: ನೆಲಮಂಗಲದ ವ್ಯಾಯಾಮಶಾಲೆಯಲ್ಲಿ ಪ್ರತಿ ವ್ಯಕ್ತಿಯಿಂದ ತಿಂಗಳಿಗೆ 250 ರೂಪಾಯಿ, ದೊಡ್ಡಬಳ್ಳಾಪುರದಲ್ಲಿ 300 ರೂಪಾಯಿ ಹಾಗೂ ದೇವನಹಳ್ಳಿಯಲ್ಲಿ 250 ರೂಪಾಯಿ ಶುಲ್ಕ ಪಡೆಯಲಾಗುತ್ತಿದೆ. ಏನಿಲ್ಲವೆಂದರೂ ಕನಿಷ್ಟ ಒಂದೊಂದು ವ್ಯಾಯಾಮ ಶಾಲೆಯಿಂದ ತಿಂಗಳಿಗೆ 10 ಸಾವಿರ ರೂಪಾಯಿ ಶುಲ್ಕ ಇಲಾಖೆಗೆ ಹೋಗುತ್ತಿದೆ. ಪ್ರತಿ ತಾಲೂಕಿನ ವ್ಯಾಯಾಮ ಶಾಲೆಯ ತರಬೇತುದಾರರಿಗೆ ಗೌರವ ಧನ ಸಹ ನೀಡಲಾಗುತ್ತಿದೆ. ಆದರೆ ವ್ಯಾಯಾಮ ಶಾಲೆಯ ನಿರ್ವಹಣೆಗೆ ಕೇಂದ್ರ ಕಚೇರಿಯಿಂದ ಬಿಡಿಗಾಸು ಸಿಗುತ್ತಿಲ್ಲ ಎನ್ನಲಾಗಿದೆ. ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಈ ಬಗ್ಗೆ ಇಲಾಖೆ ಆಯುಕ್ತರಿಗೆ ಮನವಿ ಮಾಡಲಾಗಿದೆ ಎನ್ನಲಾಗಿದೆ. ಆದರೆ ಕೇಂದ್ರ ಕಚೇರಿಯ ಆಯುಕ್ತರಿಂದ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲದಿರುವುದರಿಂದ ಇಲಾಖೆಯೂ ಕೈಚೆಲ್ಲಿದೆ. ಪರಿಣಾಮವಾಗಿ ಪರಿಕರಗಳ ನಿರ್ವಹಣೆ ಕೊರತೆ ಕಾಡುತ್ತಿದೆ.
ಉಸ್ತುವಾರಿ ಸಚಿವರಿಗೆ ಪತ್ರ: ದೇವನಹಳ್ಳಿ ಟೌನ್‌ನಲ್ಲಿನ ಕ್ರೀಡಾಂಗಣದಲ್ಲಿ ಗಾಳಿ ಬೆಳಕು ಸಮರ್ಪಕವಾಗಿಲ್ಲದಂತಹ ಕಿರಿದಾದ ಕೊಠಡಿಯಲ್ಲಿ ವ್ಯಾಯಾಮ ಶಾಲೆ ನಡೆಸಲಾಗುತ್ತಿದೆ. ಇಲ್ಲಿನ ಜಿಮ್ ಪರಿಕರಗಳು ಸರಿಯಾದ ನಿರ್ವಹಣೆ ಇಲ್ಲದೆ ದುಸ್ತಿತಿಗೆ ತಲುಪಿವೆ, ಆದ್ದರಿಂದ ನಿಮ್ಮದೆ ವಿಧಾನಸಭಾ ಕ್ಷೇತ್ರದಲ್ಲಿನ ವ್ಯಾಯಾಮ ಶಾಲೆಯ ನಿರ್ವಹಣೆಗೆ ಒತ್ತು ನೀಡಬೇಕು, ಜಿಮ್‌ಗಾಗಿ ಹೊಸ ಕಟ್ಟಡ ನಿರ್ಮಿಸಿ ಪರಿಕರಗಳ ದುರಸ್ತಿಗೆ ಮುಂದಾಗಬೇಕು ಈ ಸಂಬಂಧ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಬೇಕು ಎಂದು ನೂರಾರು ಮಂದಿ ಸಹಿ ಮಾಡಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಆದರೆ ಸಚಿವರ ಕಡೆಯಿಂದ ಇದುವರೆಗೆ ಯಾವ ಸ್ಪಂದನೆಯೂ ವ್ಯಕ್ತವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.
ದೊಡ್ಡಬಳ್ಳಾಪುರ ಶಾಸಕರಿಗೂ ಮನವಿ: ಇದೇ ರೀತಿ ದೊಡ್ಡಬಳ್ಳಾಪುರ ಶಾಸಕರಿಗೂ ಪತ್ರ ಬರೆದಿದ್ದು ಹಾಳಾಗಿರುವ ಜಿಮ್ ಪರಿಕರಗಳ ಪಟ್ಟಿ ಮಾಡಿದ್ದಾರೆ ಹಾಗೆಯೇ ನೆಲಮಂಗಲ ಶಾಸಕರಿಗೂ ಪತ್ರ ಬರೆದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ. ಆದರೆ ಜನಪ್ರತಿನಿಧಿಗಳು ಜಾಣಮೌನ ಮುರಿಯುತ್ತಿಲ್ಲ. ವ್ಯಾಯಾಮ ಶಾಲೆ ಇದ್ದರೂ ಬಳಸದಂತ ಪರಿಸ್ಥಿತಿ ಎದುರಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವ್ಯಾಯಾಮ ಶಾಲೆಯಲ್ಲಿನ ಪರಿಕರಗಳನ್ನು ಏನಿಲ್ಲವೆಂದರೂ ಕನಿಷ್ಟ ಮೂರು ತಿಂಗಳಿಗೊಮ್ಮೆಯಾದರೂ ಸರ್ವಿಸ್ ಮಾಡಬೇಕು, ಇಲ್ಲವಾದರೆ ಪರಿಕರಗಳು ಹಾಳಾಗುತ್ತವೆ, ಇವುಗಳನ್ನು ಬಳಸುವುದೂ ಅಪಾಯಕಾರಿ, ಅದರಲ್ಲೂ ಟ್ರೇಡ್‌ಮಿಲ್‌ಗಳ ನಿರ್ವಹಣೆಗೆ ಹೆಚ್ಚು ನಿಗಾವಹಿಸಬೇಕು, ಇಲ್ಲವಾದರೆ ಅಪಘಡ ಸಂಭವಿಸುವ ಅಪಾಯವಿರುತ್ತದೆ, ಈ ಬಗ್ಗೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಗಮನ ನೀಡಬೇಕು.

ರವೀಶ್, ಖಾಸಗಿ ಜಿಮ್ ತರಬೇತುದಾರ

ದೇವನಹಳ್ಳಿಗೆ ಸಂಬಂಧಪಟ್ಟಂತೆ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಪತ್ರ ಬರೆದಿದ್ದೇವೆ, ಹಾಗೇ ದೊಡ್ಡಬಳ್ಳಾಪುರಕ್ಕೆ ಸಂಬಂಧಪಟ್ಟಂತೆ ಶಾಸಕ ಧೀರಜ್‌ಮುನಿರಾಜು ಅವರಿಗೆ ಪತ್ರ ಬರೆದಿದ್ದೇವೆ. ಆದರೆ ಇದುವರೆಗೆ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ. ಇಲ್ಲಿನ ಪರಿಕರಗಳ ನಿರ್ವಹಣೆಗೆ ಇಲಾಖೆ ಒತ್ತು ನೀಡಬೇಕು ಜನಪ್ರತಿನಿಧಿಗಳು ವ್ಯಾಯಾಮ ಶಾಲೆಗಳ ಬಗ್ಗೆ ಕಾಳಜಿವಹಿಸಬೇಕು.

ನಟೇಶ್‌ಕುಮಾರ್, ದೇವನಹಳ್ಳಿ