ಜಿಲ್ಲೆ

ಇಂದಿನಿಂದ ‘ಗುತ್ತುದ ಪರ್ಬೊ’

ಗುರುಪುರ: ಗೋಳಿದಡಿಗುತ್ತು ಮನೆ ಸಮೀಪದ ಫಲ್ಗುಣಿ ನದಿ ತೀರದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಗುರು ಮಹಾಕಾಳೇಶ್ವರ ದೇವರ ಬೃಹತ್ ಏಕಶಿಲಾ ಮೂರ್ತಿಗೆ ಮುಂಬರುವ ಹೊಸ ಸಂವತ್ಸರದ ಆದಿ ಭಾಗದಲ್ಲಿ ಬ್ರಹ್ಮಕಲಶ ಪ್ರತಿಷ್ಠಾಪನಾ ಸಂಭ್ರಮ ನಡೆಯಲಿರುವುದರಿಂದ ಗೋಳಿದಡಿಗುತ್ತಿನಲ್ಲಿ ಜ.19 ಮತ್ತು 20 ರಂದು ಸರಳ ಹಾಗೂ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ವಾರ್ಷಿಕ ‘ಗುತ್ತುದ ಪರ್ಬೊ’ ನಡೆಯಲಿದೆ.

19ರಂದು ಸಂಜೆ 7ರಿಂದ ಶ್ರೀ ಕ್ಷೇತ್ರ ಪಾವಂಜೆ ಮೇಳದಿಂದ ‘ಶ್ರೀ ದೇವಿ ಮಹಾತ್ಮೆ’ ಕಾಲಮಿತಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. 20ರಂದು ಸಂಜೆ 6ರಿಂದ 8ರವರೆಗೆ ಕುದ್ರೋಳಿ ಗಣೇಶ್ ಹಾಗೂ ಬಳಗದಿಂದ ವಿಸ್ಮಯ ಜಾದೂ, ರಾತ್ರಿ 8.30ರಿಂದ 10:30ರವರೆಗೆ ದಕ್ಷಿಣ ಭಾರತದ ಮಹಮ್ಮದ್ ರಫಿ ಖ್ಯಾತಿಯ ಠಾಗೋರ್‌ದಾಸ್ ಅವರಿಂದ ‘ಏಕ್ ಶಾಮ್ ರಫೀಕೆ ನಾಮ್’ ರಸಮಂಜರಿ ನಡೆಯಲಿದೆ. ಎರಡೂ ದಿನ ಗೋಳಿದಡಿಗುತ್ತಿನಲ್ಲಿ ಶ್ರೀ ವೈದ್ಯನಾಥಾದ್ಯ ಪಂಚದೇವತೆಗಳ ಆರಾಧನೆ, ಭಜನಾ ಸತ್ಸಂಗ, ಸಾಂಸ್ಕೃತಿಕ ಕಾರ್ಯಕ್ರಮ, ನಿರಂತರ ಊಟೋಪಚಾರ ಮತ್ತು ಅತಿಥಿ ಸತ್ಕಾರ ನಡೆಯಲಿದೆ ಎಂದು ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ತಿಳಿದ್ದಾರೆ.