ಯಲ್ಲಾಪುರ: ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನದ ಹೊತ್ತಿಗೆ ಅರ್ಧ ಗಂಟೆ ಬರ್ಜರಿ ಮಳೆ ಸುರಿದಿದ್ದು, ಸಾಕಷ್ಟು ಅವಾಂತರ ಸೃಷ್ಟಿಸಿತು.
ಮಳೆಯ ಅಬ್ಬರಕ್ಕೆ ರಾಷ್ಟ್ರೀಯ ಹೆದ್ದಾರಿ ಜಲಾವೃತ್ತವಾಗಿ ಲಘು ವಾಹನಗಳ ಸಂಚಾರಕ್ಕೆ ಕೆಲಕಾಲ ಅಡಚಣೆ ಉಂಟಾಯಿತು. ಪಟ್ಟಣದ ಸಬಗೇರಿಯಿಂದ ನಾಯ್ಕನ ಕೆರೆಯವರೆಗೆ ಗಟಾರ ನೀರು ಹೆದ್ದಾರಿಯಲ್ಲಿ ವ್ಯಾಪಕವಾಗಿ ಹರಿಯಿತು.
ತಟಗಾರ ಕ್ರಾಸ್, ಉದ್ಯಮನಗರ ಕ್ರಾಸ್, ನಾಯಕನಕೆರೆ ಬಳಿ ಹೆದ್ದಾರಿಯಲ್ಲಿ ನೀರು ನಿಂತು ಲಘು ವಾಹನಗಳ ಸಂಚಾರಕ್ಕೆ ಸಮಸ್ಯೆಯಾಯಿತು. ಕೆಲವು ದ್ವಿಚಕ್ರ ವಾಹನ ಸವಾರರಿಗೆ ದೊಡ್ಡ ವಾಹನಗಳು ರಾಡಿ ನೀರು ಸಿಡಿಸಿ ಹೋಗಿದ್ದು, ಆಕ್ರೋಶಕ್ಕೆ ಕಾರಣವಾಯಿತು.
ಮಳೆ ಬಂದಾಗಲೆಲ್ಲಾ ಹೆದ್ದಾರಿಯಲ್ಲಿ ಭಾರೀ ಪ್ರಮಾಣದಲ್ಲಿ ಚರಂಡಿ ನೀರು ನಿಂತು ಸಮಸ್ಯೆಯಾಗುತ್ತಿದೆ. ಗಟಾರ ನಿರ್ವಹಣೆ ಕೈಗೊಳ್ಳಬೇಕಾದ ಹೆದ್ದಾರಿ ಪ್ರಾಧಿಕಾರ ಹಾಗೂ ಸ್ಥಳೀಯ ಆಡಳಿತ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈ ಸಮಸ್ಯೆ ನಿರಂತರವಾಗಿದೆ.