ಜಿಲ್ಲೆ

ಸಲಕರಣೆ ವಶ, 12 ಮಂದಿ ವಿರುದ್ಧ ಪ್ರಕರಣ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಗುತ್ತಲ: ಸಮೀಪದ ಗಳಗನಾಥ ಗ್ರಾಮದ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸಲು ಸಂಗ್ರಹಿಸಿಟ್ಟಿದ್ದ ಸಲಕರಣೆಗಳನ್ನು ಪೊಲೀಸರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಶುಕ್ರವಾರ ರಾತ್ರಿ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಅಕ್ರಮದಲ್ಲಿ ಭಾಗಿಯಾಗಿರುವ ಹಾಗೂ ಗ್ರಾಮದಲ್ಲಿ ಶಾಂತಿ ಭಂಗ ಉಂಟು ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬೆಳವಿಗಿ ಹಾಗೂ ಗಳಗನಾಥ ಗ್ರಾಮದ 12 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದಾಳಿಯಲ್ಲಿ ಪಿಎಸ್‌ಐ ಶಂಕರಗೌಡ ಪಾಟೀಲ, ಗಣಿ ಮತ್ತೂ ಭೂ ವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ಡಿ.ಎಚ್. ಷಣ್ಮುಖಪ್ಪ, ಭೂ ವಿಜ್ಞಾನಿಗಳಾದ ಬಿ. ಕುಮಾರ, ಶಬ್ಬೀರ ಅಹ್ಮದ ದಿಡಗೂರ, ಹನುಮಂತಪ್ಪ ಕೋಳಿ, ರಮೇಶ ಹುಲ್ಲೂರ, ಉಮೇಶ ಕೆಂಚನಗೌಡ್ರ ಹಾಗೂ ಗುಡ್ಡಪ್ಪ ಹಳ್ಳೂರ ಪಾಲ್ಗೊಂಡಿದ್ದರು.