ಬಸವಕಲ್ಯಾಣ ತಾಲೂಕಿನ ಜನವಾಡದಲ್ಲಿ ಶುಕ್ರವಾರ ಆಯೋಜಿಸಿದ್ದ ಗುರುವಂದನೆ ಹಾಗೂ ಶ್ರೀಗಳ ೭೨೨ನೇ ತುಲಾಭಾರ ಸಮಾರಂಭವನ್ನು ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿದರು. ಮಲ್ಲಿನಾಥ ಹಿರೇಮಠ ಹಾರಕೂಡ, ಮೇಘರಾಜ ನಾಗರಾಳೆ, ಪಂಡಿತರಾವ ಪಾಟೀಲ್, ವಿಜಯಕುಮಾರ ಸಂಗೋಳಗೆ, ಮಿಲಿಂದ ಕೊಳ್ಳದ, ಅಪ್ಪಣ್ಣ ಕಣ್ಣೂರ, ಮಲ್ಲಿಕಾರ್ಜುನ ಪಾಟೀಲ್, ಅಭಿಷೇಕ ಕೊಳ್ಳದ, ರಾಜ್ ಪಟೇಲ್ ಇತರರಿದ್ದರು. 
ಜಿಲ್ಲೆ

ಧರ್ಮ ಪರಂಪರೆ ಬೇರುಗಳು ಹಳ್ಳಿಗಳಲ್ಲಿಯೇ ಭದ್ರ

ಬಸವಕಲ್ಯಾಣ: ವಿಶ್ವಾತ್ಮವಾಗಿರುವ ಭಾರತ ದೇಶದಲ್ಲಿ ಕನ್ನಡ ನಾಡು ತನ್ನದೇ ಆದ ವಿಶಿಷ್ಟ ಭಕ್ತಿ ಪರಂಪರೆಯನ್ನು ಇಂದಿಗೂ ಕಾಯ್ದುಕೊಂಡು ಬಂದಿದೆ. ನಾಡಿನ ಭವ್ಯ ಧರ್ಮ ಪರಂಪರೆಯ ಬೇರುಗಳು ಹಳ್ಳಿಗಳಲ್ಲಿಯೇ ಭದ್ರವಾಗಿ ನೆಲೆಯೂರಿವೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.

ಜನವಾಡ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಗುರುವಂದನೆ ಹಾಗೂ ಹಾರಕೂಡ ಶ್ರೀಗಳ ೭೨೨ನೇ ತುಲಾಭಾರ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಆಡಂಬರದ ಜೀವನಕ್ಕಿಂತ ಆದರ್ಶದ ಜೀವನ ಶ್ರೇಷ್ಠ ಎಂಬುವುದು ಅರಿತಾಗ ಸಹಬಾಳ್ವೆಯ ಬಳ್ಳಿ ಚಿಗುರೊಡೆಯಲು ಸಾಧ್ಯ ಎಂದರು.

ಗುರುವಿನೆಡೆಗೆ, ಪರಶಿವನೆಡೆಗೆ, ನಿತ್ಯ ನಿರಂತರವಾಗಿ ಪ್ರವಾಹದೋಪಾದಿಯಲ್ಲಿ ಹರಿಸುವ ಶುದ್ಧವಾದ, ನಿರ್ಮಲವಾದ ಪ್ರೇಮ. ಜತೆಗೆ ಹರಿಯುವ ಪ್ರೇಮದಲ್ಲಿ ತ್ಯಾಗ ಮತ್ತು ಸೇವೆ ಹೆಣೆದುಕೊಂಡಿರಬೇಕು. ಇಂತಹದೊಂದು ಅದ್ಭುತ ಭಕ್ತಿಗೆ ಇವತ್ತು ಜನವಾಡ ಗ್ರಾಮ ಸಾಕ್ಷಿಯಾಗಿ ನಿಂತಿದೆ ಎಂದರು.

ಗ್ರಾಮದ ಎಲ್ಲ ಭಕ್ತರು ಸೇರಿ ನಮ್ಮನ್ನು ಶ್ರದ್ಧೆ, ನಿಷ್ಟೆಯಿಂದ ಬರಮಾಡಿಕೊಂಡು ಗುರುವಂದನೆ ಹಾಗೂ ತುಲಾಭಾರ ಸೇವೆ ಸಲ್ಲಿಸಿರುವುದು ನಾವಷ್ಟೇ ಅಲ್ಲದೆ, ಚನ್ನಬಸವ ಶಿವಯೋಗಿಗಳು ತೃಪ್ತರಾಗಿದ್ದಾರೆ ಎನ್ನುವ ಮಾತನ್ನು ಹೇಳಿ ಎಲ್ಲರ ಬಾಳು ಸುಖ, ಶಾಂತಿ, ನೆಮ್ಮದಿ, ಶ್ರೇಯಸ್ಸಿನಿಂದ ಕೂಡಿರಲಿ ಎಂದು ಶುಭ ಹಾರೈಸಿದರು.

ಪ್ರಮುಖರಾದ ಮಿಲಿಂದ ಕೊಳ್ಳದ, ಮಲ್ಲಿನಾಥ ಹಿರೇಮಠ ಹಾರಕೂಡ, ಮಹಾರುದ್ರ ಕಣ್ಣೂರ, ಅಣ್ಣಾರಾವ ಕೊಳ್ಳದ, ಧರ್ಮರಾವ ಪಾಟೀಲ್, ಡಾ.ಶಿವಪುತ್ರ ಹೊಲ್ಕರ, ವಿಠ್ಠಲ್ ಕೊಳ್ಳದ, ಗಣಪತಿ ವರ್ಮಾ, ಅಭಿಷೇಕ ಕೊಳ್ಳದ, ಹಣಮಂತ ಪಾಟೀಲ್, ಸೂರ್ಯಕಾಂತ ಶೇರಿಕರ, ಶಾಂತಪ್ಪ ಸರಜೋಳಗಿ ಇದ್ದರು.

ದೇವರಾಜ ಕೊಳ್ಳದ ಸ್ವಾಗತಿಸಿದರು. ಕನಕದಾಸ ಕಣ್ಣೂರ ಭಿನ್ನವತ್ತಳೆ ವಾಚನ ಮಾಡಿದರು. ಅಪ್ಪಣ್ಣ ಕಣ್ಣೂರ ಜನವಾಡ ವಂದಿಸಿದರು. ಅಂಬರಾಯ ಉಗಾಜಿ ನಿರೂಪಣೆ ಮಾಡಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನ ಗೀತೆ ನಡೆಸಿ ಕೊಟ್ಟರು. ರವಿ ಸ್ವಾಮಿ ಗೋಟೂರ, ಶರಣಪ್ಪ ಜಮಾದಾರ ಸಂಗೀತ ಸೇವೆ ಸಲ್ಲಿಸಿದರು. ಗ್ರಾಮಕ್ಕೆ ಆಗಮಿಸಿದ ಹಾರಕೂಡ ಪೂಜ್ಯರನ್ನು ಅಲಂಕೃತ ಸಾರೋಟಿನಲ್ಲಿ ಅದ್ದೂರಿ ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಯಿತು.