ಮಂಡ್ಯ: ಸಮಾಜದಲ್ಲಿ ಗುರುವಿನ ಸ್ಥಾನ ದೊಡ್ಡದು. ಅವರು ಕೊಟ್ಟ ಶಿಕ್ಷಣದಿಂದಲೇ ವಿದ್ಯಾರ್ಥಿಗಳು ಸಮಾಜದಲ್ಲಿ ಬದುಕಟ್ಟಿಕೊಳ್ಳಲು ಸಹಕಾರಿಯಾಗಿದೆ ಎಂದು ಹಿರಿಯ ವಿದ್ಯಾರ್ಥಿ, ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಹೇಳಿದರು.
ಪಾಂಡವಪುರ ತಾಲೂಕಿನ ಸುಂಕಾತೊಣ್ಣೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿಗಳ ಬಳಗದಿಂದ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯೆಕೊಟ್ಟ ಗುರುಗಳನ್ನು ಅಭಿನಂದಿಸುತ್ತಿರುವುದು ನಮಗೆ ಭಾವನಾತ್ಮಕ ಕ್ಷಣವಾಗಿದೆ. ಗುರುಗಳನ್ನು ಗೌರವದಿಂದ ಕಾಣುವ ಜತೆಗೆ ಅಭಿನಂಧಿಸಿದಾಗ ಮಾತ್ರ ಪ್ರತಿ ವಿದ್ಯಾರ್ಥಿಗಳ ಬದುಕು ಸಾರ್ಥಕತೆ ಪಡೆದುಕೊಳ್ಳಲಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಶಾಲೆಗಳಿಗೆ ಬರದ ದಿನಗಳಲ್ಲಿ ಗುರುಗಳು ತಮ್ಮ ಜವಾಬ್ದಾರಿಯಿಂದ ಮಕ್ಕಳನ್ನು ಶಾಲೆಗೆ ಕರೆತಂದು ಅಕ್ಷರ ಜ್ಞಾನ ಕೊಟ್ಟಿದ್ದಾರೆ. ಇದರಿಂದಲೇ ವಿದ್ಯಾರ್ಥಿಗಳು ಶಿಕ್ಷಣವಂತರಾಗಿ ತಮ್ಮ ಬದುಕು ಕಟ್ಟಿಕೊಂಡು ಸಮಾಜದಲ್ಲಿ ಗೌರವದಿಂದ ಜೀವನ ನಡೆಸಲು ಸಹಕಾರಿಯಾಗಿದೆ ಎಂದ ಅವರು, ಸುಂಕಾತೊಣ್ಣೂರು ಪ್ರೌಢಶಾಲೆಯಲ್ಲಿ ಓದುವ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕಗಳಿಸುವ ಮೂವರಿಗೆ ವೈಯುಕ್ತಿಕವಾಗಿ ಬಹುಮಾನ ನೀಡುವ ಮೂಲಕ ಪ್ರೋತ್ಸಾಹಿಸಲಾಗುವುದು ಎಂದು ಭರವಸೆ ನೀಡಿದರು.
ನಿವೃತ್ತ ಬಿಇಒ ಸುವರ್ಣದೇವಿ ಮಾತನಾಡಿ, ವಿದ್ಯೆ ಕೊಟ್ಟ ಗುರುಗಳನ್ನು ಅವರು ನಿವೃತ್ತಿಯ ನಂತರವೂ ಹಿರಿಯ ವಿದ್ಯಾರ್ಥಿಗಳಿಂದ ಸನ್ಮಾನ ಸ್ವೀಕರಿಸುವುದು ಸಂತಸದ ಕ್ಷಣ. ಅಭಿನಂದನೆಯಿಂದ ಜವಾಬ್ದಾರಿ ಹೆಚ್ಚಿಸಿದ್ದೀರಿ, ಇಲ್ಲಿ ಭಾಗವಹಿರುವ ಎಲ್ಲ ಶಿಕ್ಷಕರು ಸಾರ್ಥಕತೆಯ ಮನೋಭಾವದಿಂದ ಅಭಿನಂದನೆ ಸ್ವೀಕರಿಸಿದ್ದೇವೆ ಎಂದು ತಿಳಿಸಿದರು.
ಹಿರಿಯ ವಿದ್ಯಾರ್ಥಿಗಳಾದ ರಾಮಕೃಷ್ಣೇಗೌಡ, ಹರೀಶ್, ಶ್ರೀನಿವಾಸ್, ಶಂಕರ್, ಮೊಗ್ಗಣ್ಣ, ಯೋಗರಾಜು, ದೈತೇಗೌಡ, ಎಸ್.ಎಂ.ಯೋಗರಾಜ್, ಮಂಜುನಾಥ್, ಕಾಳೇಗೌಡ, ಎಂ.ಯು.ಯೋಗ, ಎಸ್.ಕೆ.ಕಾಳೇಗೌಡ, ಚಿಕ್ಕಣ್ಣ, ಉಮೇಶ್, ಮಹೇಶ್, ಕೃಷ್ಣೇಗೌಡ, ಮುಖ್ಯಶಿಕ್ಷಕಿ ಸರಿತಾ ಇತರರಿದ್ದರು.
ಇದೇ ವೇಳೆ ನಿವೃತ್ತ ಶಿಕ್ಷಕರಾದ ಎಲ್.ಎನ್.ನಾಯಕ್, ಬಿ.ಕೆ.ನಾಗಭೂಷಣ್, ಬಿ.ಸಿ.ಸುಮಿತ್ರಮ್ಮ, ಟಿಸಿಜೆ ಜಗದೀಶ್, ಆರ್.ಬಿ.ಮಹೇಶ್, ಕೆ.ಬಿ.ಎಲ್.ಕುಮಾರ್, ಆರ್.ನಾಗರಾಜು, ಪಿ.ಎಲ್.ನಾರಾಯಣ್, ಜಿ.ಆರ್.ನರಸಿಂಹಮೂರ್ತಿ, ಶಿಕ್ಷಕ ಯೋಗಾನಂದ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ನಿವೃತ್ತ ಶಿಕ್ಷಕರನ್ನು ಗ್ರಾಮದಿಂದ ಶಾಲೆಯವರೆಗೂ ಮೆರವಣಿಗೆ ಮೂಲಕ ಕರೆದುಕೊಂಡು ಬರಲಾಯಿತು.