ಮಂಡ್ಯ: ಅದು ಬರೋಬರಿ 38 ವರ್ಷದ ಬಳಿಕ ಎಲ್ಲರೂ ಒಟ್ಟಿಗೆ ಸೇರಿದ ಸಮಯ. ಎಲ್ಲರೂ ಒಂದಲ್ಲ ಒಂದು ರೀತಿ ಬ್ಯುಸಿಯಾಗಿದ್ದರೂ ಆ ಕಾರ್ಯಕ್ರಮಕ್ಕಾಗಿಯೇ ಆಗಮಿಸಿದ್ದರು. ಜೀವನಕ್ಕೆ ಭದ್ರಬುನಾದಿ ಹಾಕಿಕೊಟ್ಟ ಗುರುಗಳಿಗೆ ಪ್ರೀತಿಯಿಂದ ಸನ್ಮಾನಿಸಿದರು. ಗ್ರಾಮದ ತುಂಬೆಲ್ಲ ಮೆರವಣಿಗೆ ಮಾಡಿಸಿದರು. ಒಟ್ಟಾರೆ ಇಡೀ ದಿನ ನೆನಪುಗಳನ್ನು ಮೆಲುಕು ಹಾಕಿಕೊಂಡೇ ಮತ್ತೆ ಬಾಲ್ಯಕ್ಕೆ ಜಾರಿದರು.
ಇಂತಹ ವಿಶೇಷವಾದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಮದ್ದೂರು ತಾಲೂಕು ಕೌಡ್ಲೆ ಗ್ರಾಮದ ಜೆ.ಪಿ ಸ್ಮಾರಕ ಪ್ರೌಢಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮ. ಶಾಲೆಯ 1986-87ನೇ ಸಾಲಿನ ಎಸ್ಸೆಸ್ಸೆಲ್ಸಿ ಬ್ಯಾಚ್‌ನ ಹಿರಿಯ ವಿದ್ಯಾರ್ಥಿಗಳಿಂದಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ನಿವೃತ್ತ ಶಿಕ್ಷಕರು ಹಾಗೂ ಸಹಪಾಠಿಗಳೆಲ್ಲ ಒಂದೆಡೆ ಸೇರಿ ಕಾಲ ಕಳೆಯುವಂತಾಯಿತು.
ಇತ್ತೀಚಿನ ದಿನದಲ್ಲಿ ಗುರುವಂದನೆ ಕಾರ್ಯಕ್ರಮ ಟ್ರೆಂಡ್ ಆಗುತ್ತಿದೆ. ಈ ಮೂಲಕ ತಮ್ಮ ಜೀವನಕ್ಕೆ ಸರಿದಾರಿ ಮಾರ್ಗ ತೋರಿದ ಶಿಕ್ಷಕರನ್ನು ಸನ್ಮಾನಿಸಿ ಪ್ರೀತಿ ತೋರಿಸುವ ವಿಶೇಷತೆ ನಡೆಯುತ್ತಿದೆ. ಅದರಂತೆ ಕೌಡ್ಲೆ ಗ್ರಾಮದಲ್ಲಿಯೂ ಆಯೋಜಿಸಲಾಗಿತ್ತು. 1986-87ನೇ ಸಾಲಿನ ಎಸ್ಸೆಸ್ಸೆಲ್ಸಿ ಬ್ಯಾಚ್‌ನ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿ ತೋರಿದ ಪ್ರೀತಿಗೆ ಶಿಕ್ಷಕರು ಮೂಕ ವಿಸ್ಮಿತರಾದರು. ಮಾತ್ರವಲ್ಲದೆ ಭಾವುಕರಾಗಿದ್ದಲ್ಲದೆ ತಮ್ಮ ಶಿಷ್ಯಂದಿರು ರೂಪಿಸಿಕೊಂಡಿರುವ ಸದೃಢ ಬದುಕನ್ನು ಕಂಡು ಸಂತಸ ವ್ಯಕ್ತಪಡಿಸಿದರು. ಇತ್ತ ಶಿಷ್ಯಂದಿರು ಕೂಡ ಕಡಿಮೆ ಏನಲ್ಲ. ವ್ಯಾಸಂಗ ಮಾಡುವಾಗ ಕೊಟ್ಟ ಏಟುಗಳು, ಸ್ನೇಹಿತರೊಟ್ಟಿಗೆ ಕಳೆದ ಹರಟೆಯ ಕ್ಷಣಗಳನ್ನು ಮೆಲುಕು ಹಾಕಿದರು.
ಸಂಸ್ಥೆಯ ಅಧ್ಯಕ್ಷ ಕೌಡ್ಲೆ ಚನ್ನಪ್ಪ, ನಿವೃತ್ತ ಶಿಕ್ಷಕರಾದ ಕೆ.ಬಿ.ಪಾಪಣ್ಣ, ಕೆ.ಕೃಷ್ಣಪ್ಪ, ಎಲ್.ಲಿಂಗರಾಜು, ಎಚ್.ಪಿ.ಮೋಹನ್, ಎಸ್.ಸ್ವಾಮಿ, ಕೆ.ವಿ.ನಾಗರಾಜು, ರೇವಣ್ಣ ಸಿದ್ದಪ್ಪ, ಕಾಡನಗಿರಿಯಪ್ಪ, ಕೆ.ಸಿ.ಸುನಂದಾ, ಎಸ್.ಪ್ರಮೀಳಾ, ಪಾಪೇಗೌಡ ಅವರನ್ನು ಗ್ರಾಮದ ಪಟ್ಟಲದಮ್ಮ ದೇವಸ್ಥಾನದಿಂದ ಮೆರವಣಿಗೆ ಮೂಲಕ ಕರೆದುಕೊಂಡು ಬರಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ತಮ್ಮ ಗುರುಗಳನ್ನು ಮೆರವಣಿಗೆ ಮಾಡುವಾಗ ಶಿಷ್ಯಂದಿರ ಖುಷಿಗೆ ಪಾರವೇ ಇರಲಿಲ್ಲ. ಇನ್ನು ಮೆರವಣಿಗೆಗೆ ಜಾನಪದ ಕಲಾತಂಡಗಳು ಸಾಥ್ ನೀಡಿದವು.
ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಕೌಡ್ಲೆ ಚನ್ನಪ್ಪ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಈ ಕಾರ್ಯಕ್ರಮ ಇತಿಹಾಸ ಬರೆದಿದೆ. ಹಿಂದೆಂದೂ ಇಂತಹ ಚಟುವಟಿಕೆ ನಡೆದಿರಲಿಲ್ಲ. ಶಿಕ್ಷಕರಿಗೆ ಕೊಟ್ಟ ಗೌರವ, ಪ್ರೀತಿ ಕಂಡು ಖುಷಿಯಾಯಿತು. ಇದು ಮುಂದಿನ ಪೀಳಿಗೆಯವರಿಗೆ ಮಾದರಿ. ಇಂದು ಎಲ್ಲರೂ ಉತ್ತಮ ಸ್ಥಾನದಲ್ಲಿದ್ದೀರಿ. ಇದಕ್ಕೆ ಕಾರಣವಾದ ಸಂಸ್ಥೆಯನ್ನು ಎಂದಿಗೂ ಮರೆಯಬೇಡಿ ಎಂದರು.
ಇದೇ ವೇಳೆ ಹಿರಿಯ ವಿದ್ಯಾರ್ಥಿ ತರಮನಕಟ್ಟೆ ಶಿವರಾಮು ಅವರು ಪ್ರತಿ ವರ್ಷ ಜ.26ರಂದು ಶಾಲೆಗೆ 25 ಸಾವಿರ ರೂ ದೇಣಿಗೆ ನೀಡುವುದಾಗಿ ತಿಳಿಸಿದರು. ಬಳಿಕ ಶಿಕ್ಷಕರನ್ನು ಸನ್ಮಾನಿಸಲಾಯಿತು. ಹಿರಿಯ ವಿದ್ಯಾರ್ಥಿಗಳಾದ ಪ್ರಾಧ್ಯಾಪಕ ಡಾ.ಕೆ.ಚನ್ನಕೃಷ್ಣ ನಿರೂಪಣೆ ಮಾಡಿದರೆ, ಪದ್ಮಾ ಸ್ವಾಗತಿಸಿ, ತಮ್ಮಯ್ಯ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ಉಸ್ತುವಾರಿಗಳಾದ ಕೆ.ಎನ್.ರಘು, ಕೆ.ಎನ್.ಲಕ್ಷ್ಮೀನಾರಾಯಣ, ಭಾರತಿ, ಪುಟ್ಟರಾಜು ಸೇರಿದಂತೆ ಹಲವರಿದ್ದರು.