ಸುಬ್ರಹ್ಮಣ್ಯ: ಯಕ್ಷಗಾನ ಸಾರ್ವಕಾಲಿಕ ಶ್ರೇಷ್ಠ ಕಲೆ. ಎಳವೆಯಲ್ಲಿ ಮಕ್ಕಳು ಈ ಕಲೆಯನ್ನು ಅಭ್ಯಸಿಸುವುದರಿಂದ ಅವರಲ್ಲಿ ಸಂಸ್ಕಾರ ವೃದ್ಧಿಯಾಗುತ್ತದೆ. ಭಾರತೀಯ ಪರಂಪರೆ ಮತ್ತು ಸಂಸ್ಕೃತಿ ಬಗ್ಗೆ ಆಳವಾದ ಜ್ಞಾನ ಪಡೆಯಲು ಈ ಕಲೆಯ ಪಾತ್ರ ಅನನ್ಯ. ವಿದ್ಯಾರ್ಥಿಗಳಲ್ಲಿ ಸುಸಂಸ್ಕೃತ ಸಂಸ್ಕಾರ ಅನುಷ್ಠಾನಕ್ಕೆ ಯಕ್ಷಗಾನ ಕಲಿಕೆ ಪೂರಕ ಎಂದು ಬೊಳ್ವಾರು ಅಂಜನೇಯ ಯಕ್ಷಗಾನ ಕಲಾಸಂಘದ ಸಂಚಾಲಕ ಭಾಸ್ಕರ ಬಾರ್ಯ ಹೇಳಿದರು.
ಶ್ರೀ ಸುಬ್ರಹ್ಮಣ್ಯ ಮಠ ಎಜ್ಯುಕೇಶನ್ ಸೊಸೈಟಿ ಆಡಳಿತದ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಹಾಗೂ ಶ್ರೀ ವೇದವ್ಯಾಸ ವಿದ್ಯಾಲಯ ಬಿಳಿನೆಲೆ ಆಶ್ರಯದಲ್ಲಿ ಹಮ್ಮಿಕೊಂಡ ಯಕ್ಷಗಾನ ತರಗತಿಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳ ರಂಗಪ್ರವೇಶ ಮತ್ತು ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸಿದ್ಧ ಯಕ್ಷಗಾನ ಕಲಾವಿದ ನಿಡ್ಲೆ ಗೋವಿಂದ ಭಟ್, ಯಕ್ಷಗುರು ಈಶ್ವರ ಪ್ರಸಾದ ನಿಡ್ಲೆ ಮತ್ತು ನಿವೃತ್ತ ಮುಖ್ಯಶಿಕ್ಷಕ ಶ್ರೀ ಕೃಷ್ಣ ಶರ್ಮ ಪಿ.ಅವರನ್ನು ಸನ್ಮಾನಿಸಲಾಯಿತು. ತರಬೇತಿ ಪಡೆದ ವಿದ್ಯಾರ್ಥಿಗಳು ಯಕ್ಷಗುರುಗಳಿಗೆ ಗುರುವಂದನೆ ಸಲ್ಲಿಸಿದರು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಕೇಶವ ಗೌಡ, ಪ್ರೌಢಶಾಲಾ ಮುಖ್ಯಶಿಕ್ಷಕ ಸತ್ಯಶಂಕರ ಭಟ್, ವೇದವ್ಯಾಸ ವಿದ್ಯಾಲಯ ಮುಖ್ಯಶಿಕ್ಷಕ ಪ್ರಶಾಂತ್ ಬಿ.ಉಪಸ್ಥಿತರಿದ್ದರು. ಶಿಕ್ಷಕರಾದ ವಿನೋದ್, ದಿನೇಶ್ ಕುಂದರ್ ಹಾಗೂ ಕಸ್ತೂರಿ ಸನ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮ ಸಂಯೋಜಕ ಮಹಾಬಲೇಶ್ವರ ಕಾರ್ತಿಕ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳಿಂದ ಪೂರ್ವರಂಗ, ಏಕಾದಶಿ ದೇವಿಮಹಾತ್ಮೆ ಯಕ್ಷಗಾನ ಮತ್ತು ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಸತ್ವಪರೀಕ್ಷೆ ಪ್ರದರ್ಶನಗೊಂಡಿತು.