ಮಂಡ್ಯ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಇಂಡುವಾಳು ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ಗುರುವಂದನೆ ಆಯೋಜಿಸಲಾಗಿತ್ತು.
ಟ್ರಸ್ಟ್‌ನ ಐದನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಅಭಿನಂದನೆ ಹಾಗೂ ಹೆಲ್ಮೆಟ್ ವಿತರಣೆ ಸಮಾರಂಭದಲ್ಲಿ ಚುಂಚಶ್ರೀಗೆ ಪುಷ್ಪಾರ್ಚನೆಯೊಂದಿಗೆ ಗೌರವ ಸಮರ್ಪಣೆ ಮಾಡಲಾಯಿತು. ಇದಕ್ಕೆ ಹಲವು ಗಣ್ಯರು ಸಾಕ್ಷಿಯಾದರು.
ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ನನ್ನ ಜೀವನದ ಏಳಿಗೆಯಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ ಆರ್ಶೀವಾದ ಕಾರಣ. ಅವರಂತೆ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರು ಕೂಡ ಚುಂಚನಗಿರಿ ಮಠವನ್ನು ವಿಶ್ವದಲ್ಲಿಯೇ ಖ್ಯಾತಿಗೊಳಿಸುತ್ತಿದ್ದಾರೆ ಎಂದು ಹೇಳಿದರು.
ಹಿಂದೆ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ವೇಳೆ ಕೋವಿಡ್ ಹೆಚ್ಚಾಗಿತ್ತು. ಆ ಸಮಯದಲ್ಲಿ ರೈತರು ತರಕಾರಿ ಮಾರಾಟ ಮಾಡಲಾಗದೇ ಕಷ್ಟಕ್ಕೆ ಸಿಲುಕಿದ್ದರು. ಅಂತಹ ಸಮಯದಲ್ಲಿ 25 ಲಕ್ಷ ರೂ ಕೊಟ್ಟು ರೈತರಿಂದ ತರಕಾರಿ ಖರೀದಿಸಿದರು. ಆ ವೇಳೆ ಸಿಎಂ ಅವರಿಂದಲೇ ಸಚ್ಚಿದಾನಂದಗೆ ಕರೆ ಮಾಡಿಸಿದ್ದೆ. ಅದಷ್ಟೇ ಅಲ್ಲದೆ ಹಲವು ಸಾಮಾಜಿಕ ಸೇವೆ ಮಾಡಿದ್ದಾರೆ. ಈಗ 10 ಸಾವಿರ ಹೆಲ್ಮೆಟ್ ವಿತರಿಸುವ ಮಹತ್ವದ ಕೆಲಸಕ್ಕೆ ಮುಂದಾಗಿದ್ದಾರೆ. ಇಂತಹ ಯುವ ನಾಯಕರ ಅವಶ್ಯಕತೆ ಇದೆ. ನಾನು ಸಚ್ಚಿದಾನಂದ ಅವರನ್ನು ಹತ್ತಿರದಿಂದ ನೋಡಿದ್ದೇನೆ. ಸಮಾಜಕ್ಕೆ ಸೇವೆ ಮಾಡುವ ಹಂಬಲ ಇರುವಂತಹ ಅವರಿಗೆ ದೇವರು ಇನ್ನಷ್ಟು ಶಕ್ತಿ ಕೊಡಲಿ ಎಂದು ಹಾರೈಸಿದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಟ್ರಸ್ಟ್ ಸಂಸ್ಥಾಪಕ ಇಂಡುವಾಳು ಸಚ್ಚಿದಾನಂದ, ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್, ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಇತರರಿದ್ದರು.