ಬೆಳಗಾವಿ: ಕಾಲಾಂತರದಿಂದ ಗಮನಿಸುತ್ತ ಬಂದರೂ ಗುರುವಿನ ಸೇವೆ ಎಂದೆಂದಿಗೂ ಮಿಗಿಲಾದದ್ದು. ಆದಿ ಕಾಲದಲ್ಲಿ ಗುರು ಶಿಷ್ಯರ ಗಾಢವಾದ ಸಂಬಂಧ, ಕಲಿಕೆಯಲ್ಲಿ ಆಸಕ್ತಿ, ಗುರುವಿನ ಮೇಲಿನ ಭಕ್ತಿ ನಿಜಕ್ಕೂ ಅನನ್ಯ ಎಂದು ಕಾಕತಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಸುಮಿತ್ರಾ ಕರವಿನಕೊಪ್ಪ ಹೇಳಿದರು.
ನಗರದ ಫ.ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಗುರುವಿನ ಮಹತ್ವ ಮತ್ತು ಗುರು-ಶಿಷ್ಯರ ಸಂಬಂಧದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಇಂದು ಶೈಕ್ಷಣಿಕ ಪದ್ಧತಿ ಬದಲಾಗುತ್ತಿದ್ದರೂ ಗುರು ತನ್ನ ಅಸ್ತಿತ್ವ ಕಳೆದುಕೊಳ್ಳದೆ ಜವಾಬ್ದಾರಿ ಹೆಚ್ಚಾಗುತ್ತಿದೆ. ಆ ನಿಟ್ಟಿನಲ್ಲಿ ಹಿಂದಿನ ಇತಿಹಾಸಗಳೇ ಈಗ ನಮಗೆ ಮಾದರಿಯಾಗಿ ಮುಂದುವರಿಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಲಿಂಗಾಯತ ಸಂಘಟನೆ ಅಧ್ಯಕ್ಷ ಈರಣ್ಣ ದೇಯನ್ನವರ ಮಾತನಾಡಿ, ಧರ್ಮ, ಸಂಸ್ಕೃತಿ, ಆಚಾರ,ವಿಚಾರ, ನಡೆ ನುಡಿಗಳ ಸಮರ್ಪಕ ಅನುಷ್ಠಾನಕ್ಕೆ ಗುರುವೇ ಮೂಲ. ಆ ನಿಟ್ಟಿನಲ್ಲಿ ಗುರು ಸಾಮಾಜಿಕ ಜವಾಬ್ದಾರಿಯ ಪ್ರಮುಖ ಕೊಂಡಿ ಎಂದು ಬಣ್ಣಿಸಿದರು.
ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕಿಯರಾದ ಮಾಲಾ ಬುಳ್ಳಾ, ಗೀತಾ ಗಾಣಿಗೇರ, ನಿವೃತ್ತಿ ಹೊಂದಿದ ಡಿ.ಎಸ್.ಪೂಜಾ, ಶೋಭಾ ಪಾಶ್ಚಾಪುರ, ಬಿ.ಬಿ.ಕಮತೆ, ಎಂ.ವೈ.ಮೆಣಸಿನಕಾಯಿ ಮತ್ತು ಶಿಕ್ಷಕರ ಸಂಘಟನೆಯ ಪದಾಧಿಕಾರಿಗಳಾದ ರಾಮು ಗುಗ್ಗವಾಡ, ರಮೇಶ ಗೋಣಿ, ಪ್ರಕಾಶ ದೇಯನ್ನವರ ಅವರನ್ನು ಸಂಘಟನೆ ವತಿಯಿಂದ ಸತ್ಕರಿಸಲಾಯಿತು. ಆನಂದ ಕರ್ಕಿ, ವಿ.ಕೆ ಪಾಟೀಲ, ಶಂಕರ ಗುಡಸ, ಡಾ.ದಾನಮ್ಮ ಜಳಕಿ, ಗೀತಾ ತಿಗಡಿ, ಕಮಲಾ ಗಣಾಚಾರಿ, ಶಾಂತಮ್ಮ ತಿಗಡಿ, ಅಕ್ಕಮಹಾದೇವಿ ತೆಗ್ಗಿ ಸೇರಿದಂತೆ ಇತರರಿದ್ದರು. ಮಹಾದೇವಿ ಅರಳಿ ಪ್ರಾರ್ಥಿಸಿದರು. ಶಿವಾನಂದ ತಲ್ಲೂರ ಸ್ವಾಗತಿಸಿದರು. ಸಂಗಮೇಶ ಅರಳಿ ನಿರೂಪಿಸಿ, ವಂದಿಸಿದರು.