ಜಿಲ್ಲೆ

ಮುಖೇಶ ಹಿಂಗರ್ ಫೌಂಡೇಶನ್​ನಿಂದ ಗುರು ಗೌರವ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಮುಖೇಶ ಹಿಂಗರ್ ಫೌಂಡೇಶನ್ ವತಿಯಿಂದ ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲ ಬುಧವಾರದಂದು ‘ಗುರು ಗೌರವ-2025’ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮುಖ್ಯ ಭಾಷಣಕಾರರಾಗಿದ್ದ ಶ್ರೀರಂಗಪಟ್ಟಣದ ಚೇತನ ರಾಮ ಆರ್.ಎ. ಅವರು, ಇಂದಿನ ಶಿಕ್ಷಣ ವ್ಯವಸ್ಥೆ ಸವಾಲುಗಳನ್ನು ಎದುರಿಸುವ ಕುರಿತು ವಿವರವಾಗಿ ಮಾತನಾಡಿದರು.

ಶಿಕ್ಷಣದ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವವನ್ನು ನಿರ್ವಹಣೆ, ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಪರಿಣಾಮಕಾರಿ ಬೋಧನೆಗಾಗಿ ಅಳವಡಿಸಿಕೊಳ್ಳಬೇಕಾದ ತಂತ್ರಗಳು, ಶಿಕ್ಷಣದ ನವೀನ ವಿಧಾನಗಳು, ಉತ್ತಮ ಮತ್ತು ವರ್ಧಿತ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಮಂತ್ರಗಳು ಕುರಿತು ವಿವರಿಸಿದರು.

ಧಾರವಾಡದ ಹಂಚಿನಮನಿ ಸಂಸ್ಥೆಯ ಸಂಸ್ಥಾಪಕ ಪಿ.ಆರ್. ಹಂಚಿನಮನಿ, ಹುಬ್ಬಳ್ಳಿ ಎನ್​ಎಲ್​ಇ ಸಂಸ್ಥೆಯ ಕಾರ್ಯದರ್ಶಿ ರಾಜಾ ದೇಸಾಯಿ, ಶ್ರೀ ಸಿದ್ದಾರೂಢ ಸ್ವಾಮೀಜಿ ಮಠ ಟ್ರಸ್ಟ್ ಕಮೀಟಿ ಚೇರ್ಮನ್ ಸಿಎ ಚನ್ನವೀರ ಮುಂಗುರವಾಡಿ, ಚಿನ್ಮಯ ಸಂಸ್ಥೆ ಮತ್ತು ಚಿನ್ಮಯ ಮಿಷನ್ ಚೇರ್ಮನ್ ಸಿಎ ಗಿರೀಶ ಉಪಾಧ್ಯಾಯ, ಕರ್ನಾಟಕ ಕ್ಲಾಥ್ ಪ್ಯಾಲೇಸ್ ಗ್ರುಪ್ ಚೇರ್ಮನ್ ಪ್ರಕಾಶ ಕೊಠಾರಿ ಅತಿಥಿಗಳಾಗಿದ್ದರು.

ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಧಾರವಾಡದ ಕರ್ನಾಟಕ ಎಜ್ಯುಕೇಶನ್ ಬೋರ್ಡ್ ಕಾರ್ಯದರ್ಶಿ ದತ್ತಾತ್ರೇಯ ರಾಜಪುರೋಹಿತ, ಅಣ್ಣಿಗೇರಿಯ ಶ್ರೀಮತಿ ನಿಂತಮ್ಮ ಹೂಗಾರ ಶಾಲೆಯ ಪ್ರಾಚಾರ್ಯ ಎಸ್.ಎಸ್. ಹರ್ಲಾಪುರ ಮತ್ತು ಹುಬ್ಬಳ್ಳಿಯ ಶ್ರೀ ಶಾಂತಿನಾಥ ಪ್ರೌಢ ಶಾಲೆಯ ಪ್ರಾಚಾರ್ಯ ವಿಲಾಶ ಪುಗದಲೆ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಎಸ್​ಎಸ್​ಎಲ್​ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸಹ ಸನ್ಮಾನಿಸಲಾಯಿತು.