ಜಿಲ್ಲೆ

ಮೋಕ್ಷ ಸಾಧನೆಗೆ ಗುರುವಿನ ಮಾರ್ಗದರ್ಶನ ಅಗತ್ಯ

ಕೋಲಾರ ಡೆಸ್ಕ್

ಬಂಗಾರಪೇಟೆ; ಗುರು ಮತ್ತು ಪರಮಾತ್ಮನನ್ನು ಒಂದೇ ನಾಣ್ಯದ ಎರಡು ಮುಖಗಳೆಂದು ಪರಿಗಣಿಸಲ್ಪಡುತ್ತದೆ. ಜೀವಾತ್ಮ ಮತ್ತು ಪರಮಾತ್ಮನಲ್ಲಿ ಲೀನರಾದವರನ್ನು ಸದ್ಗುರು ಎಂದು ಕರೆಯಲಾಗಲಿದ್ದು, ಮೋಕ್ಷ ಸಾಧನೆಗೆ ಗುರುವಿನ ಮಾರ್ಗದರ್ಶನ ಅಗತ್ಯ ಎಂದು ಕೈವಾರ ಕ್ಷೇತ್ರದ ಧಮಾರ್ಧಿಕಾರಿ ಎಂ.ಆರ್​.ಜಯರಾಂ ತಿಳಿಸಿದರು.

ಪಟ್ಟಣದ ಖಾಸಗಿ ಹಾಲ್​ನಲ್ಲಿ ತಾಲೂಕು ಸದ್ಗುರು ಯೋಗಿನಾರೇಯಣ ಭಕ್ತವೃಂದದಿಂದ ಶನಿವಾರ ಹಮ್ಮಿಕೊಂಡಿದ್ದ ಗುರುಪೂಜೆ ಮತ್ತು ಆತ್ಮಭೋಧನಾಮೃತ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 84 ಕೋಟಿ ಜೀವ ರಾಶಿಗಳಲ್ಲಿ ಮಾನವ ಜನ್ಮ ಅತ್ಯಂತ ಪವಿತ್ರವಾಗಿದ್ದು, ಮೋಕ್ಷ ಪ್ರಾಪ್ತಿಗಾಗಿ ಅಂತರಂಗ ಮತ್ತು ಬಹಿರಂಗ ಶುದ್ಧೀಕರಣ ಮಾಡಿಕೊಳ್ಳುವುದರ ಮೂಲಕ ಭಕ್ತಿ ಮಾರ್ಗದಲ್ಲಿ ಸಾಗಬೇಕು ಎಂದರು.

ಕಲಿಯುಗದಲ್ಲಿ ಮಾನವನು ಆಡಂಬರದ ಜೀವನಕ್ಕೆ ಮಾರು ಹೋಗಿ ತನ್ನ ಮೋಕ್ಷ ಸಾಧನೆಯ ಗುರಿ ಮರೆಯುತ್ತಿದ್ದಾನೆ. ಶ್ರೀ ಕೃಷ್ಣ ಪರಮಾತ್ಮನು ಮಹಾಭಾರತದಲ್ಲಿ ಕ್ಷತ್ರೀಯ ವಂಶಕ್ಕೆ ಸೇರಿದ ಅರ್ಜುನನಿಗೆ ಜ್ಞಾನ ಧರ್ಮ ಮತ್ತು ಭಕ್ತಿಯ ಉಪದೇಶ ಮಾಡಿದ ರೀತಿ ಗುರುವಾದವರು ತನ್ನ ಶಿಷ್ಯರಿಗೆ ತಾರತಮ್ಯ ಮಾಡದೆ ಸನ್ಮಾರ್ಗ ತೋರಿಸುವಂತಾಗಬೇಕು. ಕೈವಾರ ತಾತಯ್ಯನವರು ಗುರುವಾಗಿ ಪರಮಾತ್ಮನಾಗಿ ಎಲ್ಲ ವರ್ಗ ಸಮುದಾಯಗಳ ಮೋಕ್ಷ ಪ್ರಾಪ್ತಿಗೆ ಉಪದೇಶ ನೀಡಿದವರಾಗಿದ್ದಾರೆ. ಎಲ್ಲ ವರ್ಗ ಸಮುದಾಯಗಳ ಮೋಕ್ಷ ಪ್ರಾಪ್ತಿಗೆ ಉಪದೇಶ ನೀಡಿದ್ದಾರೆ. ಕಲಿಯುಗದಲ್ಲಿ ಇರುವಂತಹ ಅಜ್ಞಾನಗಳಿಗೆ ತನ್ನ ಅನುಭವಗಳಿಂದ ಗಳಿಸಿದ ಜ್ಞಾನವೆಂಬ ಬೆಳಕನ್ನು ಉಪದೇಶದ ಮೂಲಕ ಪಸರಿಸಿ ಬೆಳಕಿನೆಡೆಗೆ ಕೊಂಡೊಯ್ದು ಮಹರ್ಷಿಯಾಗಿದ್ದಾರೆ ಎಂದರು.

ಗುರುಪೂಜೆ ಅಂಗವಾಗಿ ಸದ್ಗುರು ಶ್ರೀ ಯೋಗಿನಾರೇಯಣ ತಾತಯ್ಯ ಅವರಿಗೆ ಪಂಚಾಮೃತ ಹಾಗೂ ಪಂಚಕದ್ರವ್ಯಗಳಿಂದ ಅಭಿಷೇಕ, ಅಷ್ಟಾವಧಾನ ಸೇವೆ ನೆರವೇರಿತು.

ತಾಲೂಕು ಸೇರಿ ಜಿಲ್ಲೆಯ ನಾನಾ ಭಾಗಗಳಿಂದ ಬಲಿಜ ಸಮುದಾಯದವರು ಮತ್ತು ಕೈವಾರ ತಾತಯ್ಯನವರ ಭಕ್ತರ ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.