ಅರಟಾಳ: ಲಿಂಗ ಪೂಜೆಗಿಂತ ಜಂಗಮದಾಸೋಹ ಶ್ರೇಷ್ಠ. ನಮ್ಮೊಳಗಿನ ಕೆಟ್ಟ ಗುಣಗಳನ್ನು ಕಿತ್ತು ಹಾಕುವುದೇ ಕಾಯಕವಾಗಿದೆ ಎಂದು ಜನವಾಡ ಅಲ್ಲಮಪ್ರಭು ಆಶ್ರಮದ ಮಲ್ಲಿಕಾರ್ಜುನ ದೇವರು ಹೇಳಿದರು.
ಸಮೀಪದ ಹಾಲಳ್ಳಿಯಲ್ಲಿ ಬಸವೇಶ್ವರ ಜಯಂತಿ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಶರಣ ಸಂಸ್ಕೃತಿ ಮಹೋತ್ಸವ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಲಿಂಗಧಾರಣೆಯಿಂದ ಜೀವನ ಸುಖವಾಗಿರುತ್ತದೆ. ಗುರುವಿನ ಉಪದೇಶ ಜೀವನ ಮುಕ್ತಿಗೆ ದಾರಿಯಾಗಿದೆ. ಭಕ್ತಿಯಿಂದ ನಡೆದುಕೊಂಡವರು ದೇವರಿಗೆ ಹತ್ತಿರವಾಗುತ್ತಾರೆ. ಭಾರತ ಸಂತರು, ಶರಣ, ಮಹಾಪುರಷರ ಪುಣ್ಯ ಭೂಮಿಯಾಗಿದೆ ಎಂದರು.
ತೆಲಸಂಗದ ವೀರೇಶ ದೇವರು ಮಾತನಾಡಿ, ಕಾಯಕದ ಜತೆಗೆ ದಾನ, ಧರ್ಮ ಮಾಡಬೇಕು. ದಾನ ನಮ್ಮ ಕಷ್ಟದ ಸಮಯದಲ್ಲಿ ಕೈ ಹಿಡಿಯುತ್ತದೆ. ಎಲ್ಲರೂ ಒಂದೇ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಸಂಗೀತಗಾರ ಪ್ರಶಾಂತ ಮುದ್ದೇಬಿಹಾಳ, ಶರಣ ದೀಪಕಸಿಂಗ್ ಹಜೇರಿ ಇತರರು ಇದ್ದರು. ಶಶಿಗೌಡ ಹೊನಗೌಡ ನಿರೂಪಿಸಿ, ವಂದಿಸಿದರು.