ಜಿಲ್ಲೆ

ಗುರುಪೂರ್ಣಿಮೆ, ಗುರುವಂದನೆ ಕಾರ್ಯಕ್ಕೆ ಸಹಕರಿಸಿ

ಸೋಮನಾಥ ರೆಡ್ಡಿ

ನರಗುಂದ: ಗದಗ ಜಿಲ್ಲೆಗೆ ಮೊದಲ ಬಾರಿಗೆ ಕಾಗಿನೆಲೆಯ ಕನಕ ಗುರುಪೀಠದ ಉಸ್ತುವಾರಿಯ ಜವಾಬ್ದಾರಿ ದೊರೆತಿದೆ. ಗುರುಪೀಠದಲ್ಲಿ ನಡೆಯುವ ಗುರುಪೂರ್ಣಿಮೆ ಹಾಗೂ ಗುರುವಂದನೆ ಕಾರ್ಯಕ್ರಮಕ್ಕೆ ಸಮಾಜದವರು ಸಹಾಯ, ಸಹಕಾರ ನೀಡಬೇಕು ಎಂದು ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕೀರಪ್ಪ ಹೆಬಸೂರ ಹೇಳಿದರು.

ಗುರುಪೂರ್ಣಿಮೆ, ಗುರುವಂದನೆ ಕಾರ್ಯಕ್ರಮದ ರೂಪುರೇಷ ಕುರಿತು ಚರ್ಚಿಸಲು ಪಟ್ಟಣದ ಗಜಾನನ ದೇವಸ್ಥಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕುರುಬರ ಸಂಘದ ತಾಲೂಕು ಅಧ್ಯಕ್ಷ ನೀಲಪ್ಪ ಗುಡದನ್ನವರ ಅವರನ್ನು ಬದಲಾವಣೆ ಮಾಡುವುದಿಲ್ಲ. ರಾಜಕೀಯವಾಗಿ ಕುರುಬರು ಪ್ರಬಲರಾಗಿ ಬೆಳೆಯಬೇಕು.

ಈ ನಿಟ್ಟಿನಲ್ಲಿ ಕುರುಬರ ಸಂಘದ ಎಲ್ಲ ಸದಸ್ಯರು ಶ್ರಮಿಸಬೇಕು. ಪಟ್ಟಣದಲ್ಲಿ ಕನಕ ಭವನ ನಿರ್ಮಾಣಕ್ಕೆ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು.

ಕನಕ ಜಯಂತಿಯನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಬೇಕು. ಮಾಜಿ ಶಾಸಕ ಬಿ.ಆರ್.ಯಾವಗಲ್ಲ ಅವರಿಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಟಿಕೆಟ್ ನೀಡಿರುವುದರಿಂದ ನಮ್ಮ ಸಮಾಜಕ್ಕೆ ಒಳ್ಳೆಯದಾಗಿದೆ. ಮುಂದಿನ ಚುನಾವಣೆಳಲ್ಲಿ ಗೆಲುವು ಸಾಧಿಸಲು ಎಲ್ಲರೂ ಸಂಘಟನಾತ್ಮಕವಾಗಿ ಶ್ರಮಿಸಬೇಕು ಎಂದು ತಿಳಿಸಿದರು.

ರವಿ ದಂಡಿನ ಮಾತನಾಡಿದರು. ಜಿಲ್ಲಾ ನೌಕರರ ಸಂಘದ ಕಾರ್ಯದರ್ಶಿ ಶಶಿಧರ ರೊಳ್ಳಿ, ಚಂದ್ರು ದಂಡಿನ, ಸುನೀಲ ಕುಷ್ಟಗಿ, ಬಾಬಣ್ಣ ಹಿರೇಹೊಳಿ, ರಾಜು ಹುರಳಿ, ಫಕೀರಪ್ಪ ಸವದತ್ತಿ, ನೀಲಪ್ಪ ಗುಡದನ್ನವರ, ಪ್ರಕಾಶ ಕರಿ, ಮಂಜುನಾಥ ಮೆಣಸಗಿ, ಮಲ್ಲಪ್ಪ ಗೋನಾಳ, ಚನ್ನಬಸು ಹುಲಜೋಗಿ ಇತರರು ಉಪಸ್ಥಿತರಿದ್ದರು. ಭೀರಪ್ಪ ದುಂಡಿ ಕಾರ್ಯಕ್ರಮ ನಿರ್ವಹಿಸಿದರು.