ಜಿಲ್ಲೆ

ಓದುಗರ ಕಲ್ಪನಾಲೋಕ ತೆರೆಯುವ ಪುಸ್ತಕಗಳು,  ಚಿತ್ರನಟ ಡಾ. ಯಶವಂತ ಸರದೇಶಪಾಂಡೆ ಅಭಿಮತ, ಡಾ. ಡಿ.ವಿ. ಗುರುಪ್ರಸಾದ ಅವರ 6 ಕೃತಿಗಳ ಲೋಕಾರ್ಪಣೆ

Dharwada - Basavaraj Idli

ಹುಬ್ಬಳ್ಳಿ: ನೂತನವಾಗಿ ಲೋಕಾರ್ಪಣೆಗೊಂಡಿರುವ ಆರು ಪುಸ್ತಕಗಳು ಅತ್ಯಂತ ಶ್ರೇಷ್ಠ ಸಂಗ್ರಹಗಳಾಗಿವೆ. ಇವು ಓದುಗನನ್ನು ಸರಳವಾಗಿ ಓದಿಸಿಕೊಂಡು ಹೋಗುವಂತಿವೆ. ಓದುತ್ತ ಹೋದಂತೆ ನಮ್ಮ ಕಲ್ಪನಾ ಲೋಕವು ಹೆಚ್ಚು ತೆರೆದುಕೊಳ್ಳುತ್ತ ಹೋಗುತ್ತದೆ. ದಿನನಿತ್ಯ ಬದುಕಿನಲ್ಲಿನ ಅನೇಕ ಸಂಗತಿಗಳನ್ನು ಕೃತಿಗಳಲ್ಲಿ ಚೆಂದವಾಗಿ ಪ್ರಸ್ತುತಪಡಿಸಲಾಗಿದೆ ಎಂದು ಖ್ಯಾತ ನಾಟಕಕಾರ, ಚಿತ್ರನಟ ಡಾ. ಯಶವಂತ ಸರದೇಶಪಾಂಡೆ ಹೇಳಿದರು.

ಇಲ್ಲಿಯ ಸಪ್ನ ಬುಕ್ ಹೌಸ್ ನಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ. ಡಿ.ವಿ. ಗುರುಪ್ರಸಾದ ಅವರ ಕ್ರೈಂ ಡೈರಿ ಭಾಗ 1ರಿಂದ 4, ಸ್ಕಾಚ್,  ಸೋಡಾ ಹಾಗೂ ಸ್ನ್ಯಾಕ್ಸ್ (ಅನುಭವ ಕಥನ) ಹಾಗೂ ಕೊಕೆನ್ ರಾಜರಹಸ್ಯ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ವಿಶೇಷವಾಗಿ ಸ್ಕಾಚ್, ಸೋಡಾ, ಸ್ನ್ಯಾಕ್ಸ್ ಅನುಭವ ಕಥನವು ಓದಲು ಬಹಳ ಮಜಭರಿತವಾಗಿದೆ. ಲೇಖಕರ ಬಾಲ್ಯ, ರೈಲು, ವಿಮಾನ ಪ್ರಯಾಣದ ಅನುಭವ ಸೇರಿ ಅನೇಕ ಸೂಕ್ಷ್ಮ ಸಂಗತಿಗಳನ್ನು ಉಲ್ಲೇಖಿಸಿದ್ದಾರೆ. ಅವರೊಬ್ಬ ಶಿಸ್ತಿನ ಪೊಲೀಸ್ ಅಧಿಕಾರಿಯಾಗಿದ್ದರು. ಈಗ ಅವರ ಬರೆಹದಲ್ಲಿಯೂ ಶಿಸ್ತು ಕಾಣಬಹುದು. ಶಿಸ್ತು ಇಲ್ಲದಿದ್ದರೆ ಯಾವುದೇ ಮನುಷ್ಯ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ಬರೆಯುವ ತುಡಿತ ಇರುವ ವ್ಯಕ್ತಿಗೆ ಓದು ಎಂಬುದು ತಾನಾಗಿಯೇ ಅನಿವಾರ್ಯವಾಗುತ್ತದೆ. ಪ್ರತಿಯೊಂದು ವಿಷಯವನ್ನು ಗಮನಿಸುತ್ತ ಹೋದಂತೆ ಬರವಣಿಗೆಗೆ ತೂಕ ಬರುತ್ತದೆ ಎಂದರು.

ಲೇಖಕರಾದ ಡಾ. ಡಿ.ವಿ. ಗುರುಪ್ರಸಾದ ಮಾತನಾಡಿ, ನೂರಕ್ಕೂ ಹೆಚ್ಚು ಪುಸ್ತಕ ಬರೆದಿದ್ದೇನೆ. ಅದರಲ್ಲಿ ಕೊಕೆನ್ ರಾಜರಹಸ್ಯ ನನ್ನ ಮೆಚ್ಚಿನ ಕೃತಿಯಾಗಿದೆ. ಕೊಲಂಬಿಯಾದ ಮಾಧಕ ಲೋಕದ ರಾಜನ ಕುರಿತ ಕಥೆ ಅದಾಗಿದೆ. ಕಳೆದ 10 ವರ್ಷದಲ್ಲಿ ಯಾವ ರೀತಿ ಅಪರಾಧ ಕೃತ್ಯಗಳು ಜರುಗಿವೆ ಎಂಬುದನ್ನು ಕನ್ನಡದ ನಂಬರ್ ಒನ್ ಪತ್ರಿಕೆ ವಿಜಯವಾಣಿಯ ಆ ಕ್ಷಣ ಅಂಕಣದಲ್ಲಿ ನಿಯಮಿತ ಬರೆದೆ. ಅವುಗಳನ್ನೆಲ್ಲ ಸೇರಿಸಿ ಕ್ರೈಂಡೈರಿ ಕೃತಿ ರಚನೆ ಮಾಡಲಾಗಿದೆ ಎಂದರು.

ಸಾಹಿತ್ಯ ರಚನೆ ಮಾಡಬೇಕಾದರೆ ಮೊದಲು ಓದಬೇಕು, ಪ್ರವಾಸ ಸಂದರ್ಭದಲ್ಲಿ ಅವಲೋಕನ ಇರಬೇಕು, ಈಗಲೂ ನಾನು ನಿತ್ಯ ಕನಿಷ್ಠ ಆರು ತಾಸು ಓದಲು, ಬರೆಯಲು ಮೀಸಲು ಇಡುತ್ತೇನೆ. ಇದನ್ನು ನನಗೆ ಖ್ಯಾತ ಇಂಗ್ಲಿಷ್ ಸಾಹಿತಿ ಆರ್.ಕೆ. ನಾರಾಯಣ ಅವರು ಧಾರವಾಡಕ್ಕೆ ಬಂದಿದ್ದಾಗ ಹೇಳಿಕೊಟ್ಟಿದ್ದರು ಎಂದು ತಮ್ಮ ಅನುಭವ ಹಂಚಿಕೊಂಡರು.

ನಿತ್ಯ 500 ಶಬ್ದ ಬರೆಯಬೇಕು, ಭಾಷೆ ಸರಳವಾಗಿರಬೇಕು, ಓದಬೇಕು ಆಗಲೇ ಮನಸ್ಸು ವಿಸ್ತಾರವಾಗುತ್ತದೆ ಜತೆಗೆ ಶಿಸ್ತು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಓದುಗರೊಂದಿಗೆ ಸಂವಾದ ನಡೆಸಿದ ಗುರುಪ್ರಸಾದ ಅವರು ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು. ಓದುಗರು, ಅಭಿಮಾನಿಗಳು ಪಾಲ್ಗೊಂಡಿದ್ದರು.
ಮೇಘನ ಕಾರ್ಯಕ್ರಮ ನಿರ್ವಹಿಸಿದರು. ಸಪ್ನ ಬುಕ್ ಹೌಸ್ ಶಾಖಾ ವ್ಯವಸ್ಥಾಪಕ ರಘು ಎಂ.ವಿ. ಸ್ವಾಗತಿಸಿದರು.