ಜಿಲ್ಲೆ

ಮಳಲಿ ಗ್ರಾಪಂಗೆ ಗುರುಪಾದಪ್ಪ ಇಚ್ಚಂಗಿ ಅಧ್ಯಕ್ಷ

ಕುಂದಗೋಳ: ತಾಲೂಕಿನ ಮಳಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಗುರುಪಾದಪ್ಪ ಇಚ್ಚಂಗಿ ಆಯ್ಕೆಯಾಗಿದ್ದಾರೆ.

ಗ್ರಾಪಂ ಕಚೇರಿಯಲ್ಲಿ ಮಂಗಳವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಗುರುಪಾದಪ್ಪ ಇಚ್ಚಂಗಿ ಹಾಗೂ ಸುಮಿತ್ರಾಬಾಯಿ ಕದಂ ನಾಮಪತ್ರ ಸಲ್ಲಿಸಿದ್ದರು. 11 ಮತಗಳಲ್ಲಿ ಗುರುಪಾದಪ್ಪ ಇಚ್ಚಂಗಿ ಅವರು 7 ಮತ ಪಡೆದು ಗೆಲುವು ಸಾಧಿಸಿದರು. ಸುಮಿತ್ರಾಬಾಯಿ ಕದಂ ಅವರಿಗೆ 4 ಮತ ಪಡೆದು ಪರಾಭವಗೊಂಡರು. ತಾಪಂ ಇಒ ಜಗದೀಶ ಕಮ್ಮಾರ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ನಂತರ ಮಾತನಾಡಿದ ನೂತನ ಅಧ್ಯಕ್ಷ ಗುರುಪಾದಪ್ಪ ಇಚ್ಚಂಗಿ, ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುತ್ತೇನೆ. ನನ್ನನ್ನು ಬೆಂಬಲಿಸಿದ ಸದಸ್ಯರೇ ನಿಜವಾದ ಅಧ್ಯಕ್ಷರು. ಅವರ ಸಹಕಾರದೊಂದಿಗೆ ಪಂಚಾಯಿತಿ ವ್ಯಾಪ್ತಿಯ ಕುಂಕೂರ, ತೀರ್ಥ ಹಾಗೂ ಮಳಲಿ ಗ್ರಾಮಗಳ ಮೂಲಸೌಕರ್ಯ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಈ ಹಿಂದೆ ನಾನು ಬೆಂಬಲಿಸಿದವರು ನನ್ನನ್ನು ಕೈಬಿಟ್ಟಿರಬಹುದು. ನನ್ನ ಮೇಲೆ ವಿಶ್ವಾಸವಿಟ್ಟು ನನ್ನ ಗೆಲುವಿಗೆ ಕಾರಣರಾದ ಎಲ್ಲ ಸದಸ್ಯರಿಗೂ ನಾನು ಸದಾ ಚಿರಋಣಿ ಎಂದರು.

ಸದಸ್ಯ ಗುರುನಾಥಗೌಡ ಪಾಟೀಲ ಮಾತನಾಡಿ, ಚುನಾವಣೆಗಳು ಬರುತ್ತವೆ ಹೋಗುತ್ತವೆ. ನಾವೆಲ್ಲರೂ ಒಂದಾಗಿ, ಪಿಡಿಒ ಅವರ ಸಲಹೆ ಪಡೆದು ನಮ್ಮ ಮೂರು ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ಮಾಡಬೇಕು ಎಂದರು.

ಸದಸ್ಯರಾದ ಮಂಜುನಾಥ ದೊಡ್ಡಗೌಡ್ರ, ಮಾನಪ್ಪ ಬಡಿಗೇರ, ಲಕ್ಷ್ಮೀ ಕಳ್ಳಿಮನಿ, ಚನ್ನವ್ವ ಸಂಶಿ, ಪಿಡಿಒ ನಾಗರಾಜ ಉಳ್ಳೆಸೂರ, ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.