ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಸುದ್ದಿಗೋಷ್ಠಿ ನಡೆಸಿದರು. ರಾಜಶೇಖರ ಡೊಳ್ಳಿ, ಬಿ.ಜಿ.ಬಿರಾದಾರ ಇದ್ದರು.  
ಜಿಲ್ಲೆ

ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಗುತ್ತಿಗೆದಾರರ ಬಿಲ್ ಪಾವತಿಸಲು ಗುರುಲಿಂಗಪ್ಪ ಅಂಗಡಿ ಆಗ್ರಹ

ವಿಜಯಪುರ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಜಿಲ್ಲೆಯ ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಾಕಿ ಮೊತ್ತವನ್ನು ಬಿಡುಗಡೆಗೊಳಿಸದ ಹಿನ್ನೆಲೆ ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆ ಎದುರಾಗಿದೆ. ಹೀಗಾಗಿ ಕೂಡಲೇ ಬಾಕಿ ಹಣ ಬಿಡುಗಡೆಗೊಳಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಆಗ್ರಹಿಸಿದರು.

ಬಹುಗ್ರಾಮ ಯೋಜನೆ ಯಶಸ್ವಿಗೊಳಿಸಲು ನಿಯೋಜನೆಗೊಂಡಿರುವ ಗುತ್ತಿಗೆದಾರರಿಗೆ ರಾಜ್ಯ ಸರ್ಕಾರ ಸಕಾಲದಲ್ಲಿ ಬಿಲ್ ಪಾವತಿ ಮಾಡುತ್ತಿಲ್ಲ. ಕಳೆದ 18 ತಿಂಗಳುಗಳಿಂದ ಬಿಲ್ ಪಾವತಿಸಿಯೇ ಇಲ್ಲ. ಆದರೂ ಗುತ್ತಿಗೆದಾರರು ತಮ್ಮ ಕೈಯಿಂದ ನಿಯೋಜಿತ ಕಾರ್ಮಿಕರಿಗೆ ವೇತನ ನೀಡುತ್ತಾ ಬಂದಿದ್ದಾರೆ. ಅಲ್ಲದೇ, ನೀರಿನ ಸಮರ್ಪಕ ನಿರ್ವಹಣೆ, ನೀರು ಶುದ್ಧೀಕರಣಕ್ಕೆ ಅವಶ್ಯವಿರುವ ಬ್ಲಿಚಿಂಗ್ ಪೌಡರ್, ಕ್ಲೋರಿನ್ ಸ್ವಂತ ಖರ್ಚಿನಿಂದ ಇಲ್ಲಿಯವರೆಗೆ ಮಾಡುತ್ತಲಿದ್ದಾರೆ. ಈ ಕುರಿತು ಸಂಬಂಧಪಟ್ಟ ಇಲಾಖಾಧಿಕಾರಿಗಳು ಹಾಗೂ ಮುಖ್ಯಸ್ಥರಿಗೆ ಮೇಲಿಂದ ಮೇಲೆ ಅನೇಕ ಬಾರಿ ಪತ್ರ ಮುಖೇನ ಮತ್ತು ಮುಖತಃ ವಿನಂತಿಸಿದರೂ ಪ್ರಯೋಜನವಾಗಿಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ದೂರಿದರು.

ಜಿಲ್ಲೆಯಲ್ಲಿ ಸುಮಾರು 35 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ. ಹೀಗಾಗಿ ಗುತ್ತಿಗೆದಾರರು ಅ. 4ರಿಂದ ಯೋಜನೆಯ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಸ್ಥಗಿತಗೊಳಿಸಿದ್ದಾರೆ. ಕುಡಿಯುವ ನೀರು ಸರಬರಾಜು ಆಗದೆ ಯೋಜನೆಯ ಅವಲಂಬಿತ ಹಳ್ಳಿಗಳಲ್ಲಿ ಮುಂದೆ ಮತ್ತಷ್ಟು ನೀರಿಗಾಗಿ ಹಾಹಾಕಾರ ಉಂಟಾಗಲಿದೆ ಎಂದರು.

ರಾಜ್ಯ ಸರ್ಕಾರ ಕೂಡಲೇ ಇತ್ತ ಗಮನ ಹರಿಸಿ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಬೇಕು. ಈ ಯೋಜನೆ ವಿಜಯಪುರ ಜಿಲ್ಲೆಗೆ ಮಾತ್ರ ಸೀಮಿತವಾಗದೆ ಇದು ಇಡೀ ರಾಜ್ಯದಲ್ಲಿ ಜಾರಿಯಲ್ಲಿದೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಗುತ್ತಿಗೆ ಪಡೆದ ಗುತ್ತಿಗೆದಾರರು ನಿರ್ವಹಣೆ ಮತ್ತು ಕಾರ್ಯಾಚರಣೆ ಸ್ಥಗಿತಗೊಳಿಸುವ ಸಂಭವ ಹೆಚ್ಚಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಕುಡಿಯುವ ನೀರು ಪೂರೈಕೆಗೂ ನೀಡಲು ಅನುದಾನ ಇಲ್ಲದಂತ ಪರಿಸ್ಥಿತಿ ಇದೆ. ಒಂದು ವೇಳೆ ರಾಜ್ಯ ಸರ್ಕಾರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ನಿರಾಸಕ್ತಿ ವಹಿಸಿದರೆ ಜನರು ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದರು.
ಮುಖಂಡರಾದ ರಾಜಶೇಖರ ಡೊಳ್ಳಿ, ಡಿ.ಜಿ.ಬಿರಾದಾರ ಇದ್ದರು.