ಹನೂರು: ಇತ್ತೀಚೆಗೆ ಬಿಡುಗಡೆಯಾದ ನನ್ನ ಕಬ್ಬಿಣದ ಕುದುರೆ ಕೃತಿಗೆ ದಿ.ಗುರುಲಿಂಗಯ್ಯ ಅವರೇ ಮೂಲ ಪ್ರೇರಣೆ ಎಂದು ಸಾಹಿತಿ ಹನೂರು ಚೆನ್ನಪ್ಪ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಶನಿವಾರ ತಾಲೂಕು ಪರಿಶಿಷ್ಟ ಜಾತಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಗೌತಮ್ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿದ್ದ ದಿವಂಗತ ಬಿಇಒ ಎನ್.ಗುರುಲಿಂಗಯ್ಯ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಲವು ವರ್ಷಗಳಿಂದ ನನ್ನ ಜತೆ ಉತ್ತಮ ಒಡನಾಟವನ್ನು ಹೊಂದಿದ್ದ ದಿ.ಗುರುಲಿಂಗಯ್ಯ ಅವರು ಸ್ನೇಹಜೀವಿಯಾಗಿದ್ದು, ಸೃಜನಶೀಲ ಅಧಿಕಾರಿಯಾಗಿದ್ದರು. ವೃತ್ತಿಯಲ್ಲಿ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದ್ದರು. ಸಹದ್ಯೋಗಿ ಹಾಗೂ ಅಧಿಕಾರಿಗಳೊಂದಿಗೆ ಸೌಮ್ಯದಿಂದ ವರ್ತಿಸುತ್ತಿದ್ದರು. ಇವರು ಶಿಕ್ಷಕ, ಮುಖ್ಯಶಿಕ್ಷಕ, ಜಿಲ್ಲಾ ಮಟ್ಟದ ಬಿಸಿಯೂಟ ಅಧಿಕಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಉತ್ತಮವಾಗಿ ಸೇವೆ ಸಲ್ಲಿಸಿದ್ದು, ಕಳೆದ ಒಂದು ವರ್ಷದಿಂದ ಹೆಚ್ಚು ಶಿಕ್ಷಕರು ಹಾಗೂ ನೌಕರರನ್ನು ಹೊಂದಿರುವ ಹನೂರು ಶೈಕ್ಷಣಿಕ ವಲಯದಲ್ಲಿ ಬಿಇಒ ಆಗಿ ಪ್ರಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿದ್ದರು. ಸೇವೆಗೆ ಹೆಚ್ಚಿನ ಒತ್ತನ್ನು ನೀಡಿದ್ದ ಇವರು ಅನಾರೋಗ್ಯ ಸಮಸ್ಯೆ ಇದ್ದರೂ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿರಲಿಲ್ಲ. ಒತ್ತಡಕ್ಕೆ ಒಳಗಾಗಿ ಹೃದಯಾಘಾತದಿಂದ ನಿಧನರಾಗಿರುವುದು ನಿಜಕ್ಕೂ ನೋವಿನ ಸಂಗತಿ. ಇದರಿಂದ ಕುಟುಂಬ, ಸಮುದಾಯ ಹಾಗೂ ಶಿಕ್ಷಕ ವರ್ಗಕ್ಕೆ ತುಂಬಲಾರದ ನಷ್ಟವಾಗಿದೆ. ಇವರಿಗೆ ದೇವರ ದುಃಖ ಭರಿಸುವ ಶಕ್ತಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ದೊರಕಿಸಲಿ ಎಂದು ಆಶಿಸಿದರು.
ಶಾಸಕ ಎಂ.ಆರ್ ಮಂಜುನಾಥ್ ಮಾತನಾಡಿ, ದಿ. ಗುರುಲಿಂಗಯ್ಯ ಅವರು ಅಧಿಕಾರಿ ಹಾಗೂ ನೌಕರರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ವೃತ್ತಿಯಲ್ಲಿ ನೈಪುಣ್ಯ ಹಾಗೂ ದಕ್ಷತೆಯಿಂದ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚಿಗೆ ಪೆದ್ದನಪಾಳ್ಯ ಶಾಲಾ ಸಮಸ್ಯೆಗೆ ಹೆಚ್ಚಿನ ಒತ್ತು ನೀಡಿ ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದರು. ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಪಡೆಯಲು ನೀಡಿದ ಸಲಹೆಯಂತೆ ಅಗತ್ಯ ಶ್ರಮ ವಹಿಸಿದ್ದು, ಉತ್ತಮ ಸೇವೆ ಸಲ್ಲಿಸುತ್ತಿದ್ದರು. ಆದರೆ ಇವರ ಅಗಲಿಕೆ ನೋವನ್ನು ಉಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ದಿ. ಗುರುಲಿಂಗಯ್ಯ ಪತ್ನಿ ಉಷಾರಾಣಿ ಅವರನ್ನು ಗೌರವಿಸಲಾಯಿತು.
ಬಿಇಒ ಮಹೇಶ್, ಪರಿಶಿಷ್ಟ ಜಾತಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಾದೇಶ್, ಗೌತಮ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರವೀಂದ್ರ, ಪಪಂ ಮಾಜಿ ಸದಸ್ಯ ಸಿದ್ದರಾಜು, ಪಪಂ ಮುಖ್ಯಾಧಿಕಾರಿ ಮಹೇಶ್‌ಕುಮಾರ್, ಮುಖ್ಯ ಶಿಕ್ಷಕ ಕಾಂತರಾಜು, ಶಿಕ್ಷಕರಾದ ಫ್ರಾನ್ಸಿಸ್, ಗಿರೀಶ್, ಮೂರ್ತಿ, ಸಿದ್ದರಾಜು, ಪಿಎಸಿಸಿ ಮಾಜಿ ಅಧ್ಯಕ್ಷ ನಟರಾಜೇಗೌಡ, ಸದಸ್ಯ ಮಂಜೇಶ್ ಇತರರು ಇದ್ದರು.