ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮAದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಸಿಂಧೆ, ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ ಮತ್ತಿತರರಿದ್ದರು.  
ಜಿಲ್ಲೆ

ಗುರುಕುಲ ಶಿಕ್ಷಣ ಪದ್ಧತಿ ಅಗತ್ಯ : ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ

Bellari - Heera Nayak

ವಿಜಯಪುರ : ಇಂದಿನ ನಮ್ಮ ಮಕ್ಕಳಿಗೆ ಗುರುಕುಲ ಶಿಕ್ಷಣ ಪದ್ಧತಿಯ ಅವಶ್ಯಕತೆ ಇದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಾಕ್ಷರತಾ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಬದಲಾಗಿ ಯುರೋಪಿಯನ್ ಶಿಕ್ಷಣ, ಅಲ್ಲಿಯ ಬಗ್ಗೆ ಹೆಚ್ಚಿಗೆ ಗೊತ್ತಿರುತ್ತಿದೆ. ನಮ್ಮ ಮಕ್ಕಳಿಗೆ ಸಾಮಾಜಿಕ ನ್ಯಾಯ, ರಾಷ್ಟ್ರ ಪ್ರೇಮ, ಸಂಸ್ಕೃತಿ, ಸಮಾನತೆಯ ಬಗ್ಗೆ ನಾವು ಹೇಳಿಕೊಡಲಿಲ್ಲ. ಇಂದಿನ ಶಿಕ್ಷಣದ ವ್ಯವಸ್ಥೆಯಿಂದಾಗಿ ಮಕ್ಕಳು ದುಶ್ಚಟ, ಆತ್ಮಹತ್ಯೆ ಅಂತಹ ಕೃತ್ಯಕ್ಕೆ ಮುಂದಾಗುತ್ತಿದ್ದಾರೆ ಎಂದು ವಿಷಾದಿಸಿದರು.

ನಮ್ಮಲ್ಲಿ ಹಿಂದಿನ ಕಾಲದಲ್ಲಿ ಅತ್ಯುತ್ತಮವಾದ ಗುರುಕುಲ ಶಿಕ್ಷಣ ಪದ್ಧತಿ ಇತ್ತು. ನಂತರ ಕಾಲ ಬದಲಾದಂತೆ ಬ್ರಿಟಿಷರಿಗೂ ನಮ್ಮನ್ನು ಗುಲಾಮರನ್ನಾಗಿ ಮಾಡಿಕೊಳ್ಳಬೇಕೆಂಬ ಇಚ್ಛೆ ಇತ್ತು. ಅದಕ್ಕೆ ಅವರಿಗೆ ಇಂಗ್ಲಿಷ್ ಪದ್ಧತಿಯ ಶಿಕ್ಷಣವನ್ನು ಕೊಡಬೇಕು ಎಂದು ನಿರ್ಧರಿಸಿದರು. ಅದರ ಪರಿಣಾಮವೇ ಮೆಕಾಲೆ ಶಿಕ್ಷಣ ಪದ್ಧತಿ ಜಾರಿಯಾಯಿತು ಎಂದರು.

ಶಿಕ್ಷಕರು ಅನಾದಿಕಾಲದಿಂದಲೂ ಗೌರವಕ್ಕೆ ಪಾತ್ರರಾಗಿದ್ದವರು. ನಮ್ಮಲ್ಲಿ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣನಂಥವರು ಇದ್ದಾರೆ. ಜೊತೆಗೆ ನಮ್ಮಲ್ಲಿ ಮಲ್ಲಪ್ಪ ಶೆಟ್ಟಿ ಅಂತಹವರೂ ಇದ್ದಾರೆ, ಅದು ಎಲ್ಲ ವಲಯಗಳು ಹೊರತಲ್ಲ ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ರಾಜಕರಣಿಗಳ ಹಿಂದೆ ತಿರುಗಾಡುವವರೇ ಬಹುತೇಕ ಆದರ್ಶ ಶಿಕ್ಷಕರಾಗುತ್ತಿದ್ದಾರೆ. ಜಿಲ್ಲಾಡಳಿತ ಈ ಹಿನ್ನೆಲೆಯಲ್ಲಿ ಪಾರದರ್ಶಕ ವ್ಯವಸ್ಥೆ ರೂಪಿಸಿ ಆದರ್ಶ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಬೇಕು ಸಲಹೆ ನೀಡಿದರು.

ಇಡೀ ರಾಜ್ಯಕ್ಕೆ ಶಿಕ್ಷಕರನ್ನು ನೀಡಿದ ಕೀರ್ತಿ ನಮ್ಮ ಜಿಲ್ಲೆಗೆ ಸಲ್ಲುತ್ತಿದೆ. ಅನೇಕ ಹಿರಿಯ ಶಿಕ್ಷಕರು ಶಿಕ್ಷಣ ಕ್ಷೇತ್ರಕ್ಕೆ ಮಹೋನ್ನತ ಕೊಡುಗೆ ನೀಡಿದ್ದಾರೆ. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಹಣ ಕೊಟ್ರೆ ಎಲ್ಲ ಕೆಲಸ ಆಗುತ್ತಿದೆ ಎನ್ನುವ ಭಾವನೆ ಶಿಕ್ಷಕರಲ್ಲಿ ಇದೆ. ಬಹುತೇಕ ಶಿಕ್ಷಕರು ರಾಜಕೀಯದಲ್ಲಿಯೇ ಬ್ಯುಸಿ ಆಗಿದ್ದಾರೆ. ಶಾಸಕರ ಹಿಂದೆಯೇ ತಿರುಗಾಡುತ್ತಿರುತ್ತಿದ್ದರು. ಈಗ ಯಾರೂ ಸುತ್ತಾಡುತ್ತಿಲ್ಲ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಸಿಂಧೆ, ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಡಿಡಿಪಿಐ ಉಮೇಶ್ ಶಿರಹಟ್ಟಿಮಠ ಇತರರು ಉಪಸ್ಥಿತರಿದ್ದರು. ಇದೇ ವೇಳೆ ೨೧ ಶಿಕ್ಷಕರಿಗೆ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.