ಹೊಸಕೋಟೆ: ಶತಮಾನಗಳ ಹಿಂದೆಯೇ ಗುರುಕುಲ ಶಿಕ್ಷಣ ಪದ್ಧತಿ ಆರಂಭಿಸಿದ್ದು, ನಮ್ಮ ಸಂಸ್ಕೃತಿ. ಇದನ್ನೇ ಆಧರಿಸಿ ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದರು ಎಂದು ಶಾಸಕ ಶರತ್ ಬಚ್ಚೇಗೌಡ ಅಭಿಪ್ರಾಯಪಟ್ಟಿದ್ದಾರೆ.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ 132ನೇ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಸಮಾಜ ಉತ್ತಮ ರೀತಿಯಲ್ಲಿ ಪರಿವರ್ತನೆ ಆಗಬೇಕಾದರೆ ಯುವಕರಿಗೆ ಉತ್ತಮ ಶಿಕ್ಷಣ ನೀಡುವುದು ಅವಶ್ಯ. ಈ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜದ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರು ಮಹತ್ತರ ಕೊಡುಗೆ ನೀಡುತ್ತಿದ್ದಾರೆ ಎಂದರು.
ಶತಮಾನಗಳ ಹಿಂದೆ ಗುರುಕುಲ ಪದ್ಧತಿ ಭಾರತದಲ್ಲಿ ಚಾಲ್ತಿಯಲ್ಲಿತ್ತು. ಆಗ ಗುರುಕುಲಕ್ಕೆ ಸೇರುತ್ತಿದ್ದ ವಿದ್ಯಾರ್ಥಿಗಳು ಪರಿಪೂರ್ಣತೆ ಸಾಧಿಸುತ್ತಿದ್ದರು. ಜತೆಗೆ ಉತ್ತಮ ಜ್ಞಾನದೊಂದಿಗೆ ಸಮಾಜದ ಜತೆಗೆ ಬೆರೆಯುತ್ತಿದ್ದರು. ಈ ರೀತಿಯ ಗುರು-ಶಿಷ್ಯ ಪರಂಪರೆ ಈಗ ವಸತಿ ಶಾಲೆಗಳಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.
ಇಸ್ಲಾಂ, ಗ್ರೀಕ್ ಮತ್ತು ಪರ್ಶಿಯನ್ನರು ಭಾರತಕ್ಕೆ ವಲಸೆ ಬಂದ ನಂತರದಲ್ಲಿ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಬಹಳಷ್ಟು ಬದಲಾವಣೆ ಆದವು. ಬ್ರಿಟಿಷರ ಆಳ್ವಿಕೆಯಲ್ಲಿ ಲಾರ್ಡ್ ಮೆಕಾಲಿ ದುರುದ್ದೇಶಪೂರಿತ ಶಿಕ್ಷಣ ಪದ್ಧತಿ ಜಾರಿ ಮಾಡಿದ. ಇದರಿಂದ ಭಾರತದ ವಿವಿಧ ಪ್ರಾಂತ್ಯಗಳಲ್ಲಿದ್ದ ವಿವಿಧ ಭಾಷೆಗಳ ಕಲಿಕಾ ವಿಧಾನ ಬದಲಾಗಿ ಇಂಗ್ಲಿಷ್ ಆಧಾರಿತ ಶಿಕ್ಷಣ ಜಾರಿಗೆ ಬಂದಿತು ಎಂದರು.
ತಾಪಂ ಸದಸ್ಯರಾದ ಡಿ.ಟಿ. ವೆಂಕಟೇಶ್, ಮನ್ಸೂರ್, ಕ್ಷೇತ್ರ ಸಮನ್ವಯಾಧಿಕಾರಿ ಲಲಿತಮ್ಮ, ನಗರಸಭೆ ಸದಸ್ಯರಾದ ಕೇಶವಮೂರ್ತಿ, ಗೌತಮ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನಿಶಾಮಪ್ಪ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮುನಿರಾಜ್, ಗ್ರಾಮೀಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ. ಶ್ರೀಕಾಂತ್, ತಾಲೂಕು ಅಧ್ಯಕ್ಷ ಅಣ್ಣಯ್ಯಪ್ಪ ಮತ್ತಿತರರಿದ್ದರು.
ತಾಲೂಕಿನಲ್ಲಿರುವ ಸರ್ಕಾರಿ ಶಾಲೆಗಳ ಪೈಕಿ 5 ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಲಾಗುತ್ತಿದೆ. ಈ ಬಾರಿ ಸರ್ಕಾರಿ ಶಾಲೆಗಳಲ್ಲಿನ ದಾಖಲಾತಿ ಪ್ರಮಾಣ ಹೆಚ್ಚಾಗಿರುವುದು ಸಂತಸ ತಂದಿದೆ. ಎಸ್.ಎನ್. ಕನ್ನಯ್ಯ ಹೊಸಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿ