ಗುರುಗುಂಟಾ: ಗ್ರಾಮ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ಕಾರ ಹುಣ್ಣಿಮೆಯನ್ನು ರೈತಾಪಿ ವರ್ಗ ಸಂಭ್ರಮದಿಂದ ಆಚರಿಸಿದರು.
ಎತ್ತುಗಳ ಕೊಂಬುಗಳಿಗೆ ಬಣ್ಣ ಹಚ್ಚಿ, ರಿಬ್ಬನ್ ಕಟ್ಟಿ, ಕೊರಳಿಗೆ ಗೆಜ್ಜೆ ಹಾಗೂ ಅಲಂಕೃತ ವಸ್ತುಗಳಿಂದ ಸಿಂಗರಿಸಿ, ಪೂಜೆ ಸಲ್ಲಿಸಿದರು.
ನಂತರ ಕಣಿ, ತಮಟೆ ವಾದ್ಯಗಳೊಂದಿಗೆ ಗ್ರಾಮದಲ್ಲೆಲ್ಲ ಮೆರವಣಿಗೆ ನಡೆಸಿ ಕುಣಿದು ಕುಪ್ಪಳಿಸಿದರು.
ಸಂಸ್ಥಾನದ ಸಂಪ್ರದಾಯದಂತೆ ದರ್ಬಾರಿನಿಂದ ಮುಜುಮದಾರ್, ಗುಮೇದಾರ್, ಸುಬೇದಾರ್, ಹವಾಲ್ದಾರ್, ದಿವಾಣದೇರ್ ಐದು ಜೋಡಿಯ ಎತ್ತುಗಳನ್ನು ಗ್ರಾಮದ ಕಕ್ಕೇರಿ ಅಗಸಿಗೆ ಹೊಂದಿಕೊಂಡ ಬಸವೇಶ್ವರ ದೇಗುಲದವರೆಗೆ ಮೆರವಣಿಗೆ ಮೂಲಕ ಕರೆದೊಯ್ದರು.
ವೇದಮೂರ್ತಿ ರಾಚಯ್ಯಸ್ವಾಮಿ ಗಂಭೀರಮಠ ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಹೋಳಿಗೆ ಸೇರಿದಂತೆ ಸಿಹಿ ತಿನಿಸುಗಳನ್ನು ತಿನ್ನಿಸಿದರು. ಬಳಿಕ ಸಂಸ್ಥಾನಿಕ ರಾಜಾ ಸೋಮನಾಥನಾಯಕ ಕರಿ ಹರಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹವಾಲ್ದಾರರ ಬಿಳಿ ಎತ್ತು ವೇಗವಾಗಿ ಓಡಿ ಪ್ರಥಮ ಸ್ಥಾನ ಗಳಿಸಿತು. ಬಿಳಿ ವರ್ಣದ ಎತ್ತು ಮುಂಚೂಣಿ ಕಂಡಿದ್ದರಿಂದ ಈ ವರ್ಷದಲ್ಲಿ ಬಿಳಿ ವರ್ಣದ ಬೆಳೆಗಳು ಉತ್ಕೃಷ್ಟವಾಗಿ ಬೆಳೆಯುತ್ತವೆಂಬ ನಿರೀಕ್ಷೆ ಅಲ್ಲಿ ನೆರೆದ ರೈತರದ್ದಾಗಿತ್ತು.
ಕರಿ ಹರಿವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಬಸವೇಶ್ವರ ದೇಗುಲದದಿಂದ ಕಕ್ಕೇರಿ ಅಗಸಿಯ ರಸ್ತೆಯ ಇಕ್ಕೆಲಗಳಲ್ಲಿ ನೂರಾರು ಜನ ಪಾಲ್ಗೊಂಡಿದ್ದರು.
ನಂತರ ಅಗಸಿಯ ಮುಂದಿನ ಬಯಲು ಆವರಣದಲ್ಲಿ ಯುವಕರಿಂದ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ನಡೆಯಿತು.
ಸ್ಪರ್ಧೆಯಲ್ಲಿ 73 ಕೆಜಿ ಭಾರವನ್ನು ಯುವಕ ಆದೇಶನಾಯಕ ಗ್ಯಾಂಗ್‌ಮನ್ ಒಂದೇ ಕೈಯಲ್ಲಿ ಎತ್ತಿ ಪ್ರಥಮ ಸ್ಥಾನ ಪಡೆದರು.