ಜಿಲ್ಲೆ

ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಿ

ಪ್ರವೀಣ ಉದುಸಾ ದಲಬಂಜನ್


ಗುರುಗುಂಟಾ: ಗುರುಗುಂಟಾ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಇಲ್ಲಿನ ಜೆಸ್ಕಾಂನ 110 ವಿದ್ಯುತ್ ವಿತರಣಾ ಶಾಖೆಗೆ ಬುಧವಾರ ಸಂಜೆ ದಿಢೀರ್ ಮುತ್ತಿಗೆ ಹಾಕಿ, ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿತು.

ಗುರುಗುಂಟಾ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ 2017ರಿಂದ ವಿದ್ಯುತ್ ಸಮಸ್ಯೆ ಪರಿಹರಿಸಲು ಜೆಸ್ಕಾಂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಕೇಂದ್ರ ಸ್ಥಾನದಲ್ಲಿರದ ಲೈನ್‌ಮನ್‌ರಿಂದ ಕರೆಂಟ್ ಹೋದರೆ ಬರುವ ಖಾತ್ರಿಯಿಲ್ಲ. ನಿಗದಿತ ಲೋಡ್ ಶೆಡ್ಡಿಂಗ್ ವೇಳೆಯಲ್ಲಿಯೂ ಐಪಿ ಸೆಟ್‌ನ ಲೈನ್‌ಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಕೇಳಿದರೆ ಇಲ್ಲದ ಸಬೂಬು ಹೇಳಿ ಜಾರಿಗೊಳ್ಳುತ್ತಿದ್ದಾರೆ. ಇದರ ಮೇಲೆ ಅವಲಂಬಿತ ಪಂಪ್‌ಸೆಟ್‌ಗಳು ಸ್ಥಗಿತಗೊಂಡು ಬೆಳೆಗಳು ಹಾಳಾಗುತ್ತಿವೆ. ವಿದ್ಯುತ್ ಪರಿವರ್ತಕ ಸುಟ್ಟರೆ ತಿಂಗಳುಗಟ್ಟಲೆ ಕಾಯಬೇಕು. ಕೆಲ ದೊಡ್ಡಿಗಳಲ್ಲಿ ವಿದ್ಯುತ್ ಕಂಬಗಳನ್ನು ಹಾಕಿ ಸಂಪರ್ಕ ಕಲ್ಪಿಸಿಲ್ಲ. ಗುತ್ತಿಗೆದಾರರು ಮಾತ್ರ ಮೀಟರ್ ಅಳವಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಹಕರು ವಿದ್ಯುತ್ ಬಳಸದಿದ್ದರೂ ಇಲಾಖೆಯಿಂದ ಬಿಲ್ ಕೊಡುವುದು ಮಾತ್ರ ನಿಂತಿಲ್ಲ. ಗ್ರಾಮದ ಕೆಲವೆಡೆ ವಿದ್ಯುತ್ ಪ್ರವಹಿಸುವ ಮುಖ್ಯ ವೈರ್‌ಗಳು ನೆಲಕ್ಕೆ ಬೀಳುವ ಹಂತಕ್ಕೆ ತಲುಪಿದ್ದು, ಜೀವ ಭಯದಲ್ಲಿ ಜನ ಓಡಾಡುವಂತಾಗಿದೆ. ಅದನ್ನು ಸರಿಪಡಿಸುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ. ಸ್ವಲ್ಪ ಮಳೆ ಗಾಳಿ ಬಂದರೂ ದಿನಪೂರ್ತಿ ವಿದ್ಯುತ್ ಸ್ಥಗಿತಗೊಳ್ಳುತ್ತದೆ. ಸಮಸ್ಯೆ ಪರಿಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಿಂದ ಗ್ರಾಹಕರು ಎರಡು ಗಂಟೆ ಕಾಲ ವಿದ್ಯುತ್ ಇಲ್ಲದೆ ಪರಿತಪಿಸಿದರು.