ಗುರುಗುಂಟಾದಲ್ಲಿ ಬೀಡುಬಿಟ್ಟಿರುವ ನಾಟಕ ಕಂಪನಿ. 
ಜಿಲ್ಲೆ

ನೇಪಥ್ಯಕ್ಕೆ ಸರಿಯುತ್ತಿರುವ ನಾಟಕ ಕಂಪನಿಗಳು

ಗುರುಗುಂಟಾ: ಕರೊನಾ ಪರಿಣಾಮ, ಆಧುನೀಕರಣ ಮತ್ತು ಜಾಗತೀಕರಣದ ಪ್ರಭಾವದಿಂದಾಗಿ ಪ್ರೇಕ್ಷಕರನ್ನು ರಂಜಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದ ನಾಟಕ ಕಂಪನಿಗಳು ನೇಪಥ್ಯಕ್ಕೆ ಸರಿಯುತ್ತಿವೆ. ಇದನ್ನೇ ನೆಚ್ಚಿಕೊಂಡಿದ್ದ ಕಲಾವಿದರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಗುರುಗುಂಟಾದಲ್ಲಿ ಬೀಡು ಬಿಟ್ಟಿರುವ ಬಸವೇಶ್ವರ ನಾಟಕ ಕಂಪನಿಯೂ ಇದಕ್ಕೆ ಹೊರತಾಗಿಲ್ಲ.

ಟಿ.ವಿ., ಮೊಬೈಲ್, ಇಂಟರ್‌ನೆಟ್ ಪ್ರಭಾವದಿಂದಾಗಿ ನಾಟಕಗಳು, ಗ್ರಾಮೀಣ ಕಲೆಗಳು, ಸಣ್ಣಾಟ, ದೊಡ್ಡಾಟ, ಬಯಲಾಟ, ಜಾನಪದ ಕಲೆಗಳು ನಿಧಾನಕ್ಕೆ ಮರೆಯಾಗುತ್ತಿವೆ. 2012ರಲ್ಲಿ ಬಾಬುರಾವ್ ಸಿತಾರ್ ಮಾಲೀಕತ್ವದಲ್ಲಿ ಜನ್ಮತಳೆದ ಈ ನಾಟಕ ಕಂಪನಿ ದಶಕಗಳ ಕಾಲ ಪೌರಾಣಿಕ, ಸಾಮಾಜಿಕ ನಾಟಕಗಳನ್ನು ಪ್ರದರ್ಶನಗೊಳಿಸಿದೆ. ಇದು ಒಂದೆಡೆಯಾದರೆ ಎಲ್ಲರಂತೆ ಸುಂದರ ಬದುಕು ಕಟ್ಟಿಕೊಳ್ಳಲಿಲ್ಲವೆಂಬ ಕೊರಗು ಮಾಲೀಕರ ಕುಟುಂಬಸ್ಥರದು. ಎಳೆಯ ವಯಸ್ಸಿಗೆ ಬಣ್ಣ ಬಳಿದು ರಂಗ ಪ್ರವೇಶಿಸಿದ ನಾವು ಏಳು-ಬೀಳುಗಳನ್ನು ಕಂಡು ಇಂದಿನವರೆಗೂ ನಮ್ಮೆಲ್ಲೆರ ಸರ್ವಸ್ವವನ್ನು ರಂಗಭೂಮಿಗೆ ಮುಡಿಪಾಗಿಟ್ಟಿದ್ದೇವೆ ಎನ್ನುತ್ತಾರೆ ಮಾಲೀಕ ಬಾಬುರಾವ್. ಪಾತ್ರಧಾರಿಗಳ ಪಗಾರ ಮತ್ತು ಲಾರಿ ಬಾಡಿಗೆಗೆ ಹಣ ಹೊಂದಿಸಲು ಪರದಾಡಿದ್ದೇವೆ ಎಂದು ತಮ್ಮ ಅಸಹಾಯಕತೆ ತೋಡಿಕೊಳ್ಳುತ್ತಾರೆ.

ಒಮ್ಮೆ ಬಣ್ಣ ಬಳಿದು ಈ ಕ್ಷೇತ್ರದತ್ತ ಮುಖ ಮಾಡಿದರೆ ಸಾಕು, ನಮಗೆ ಉಳಿದಾವ ಕ್ಷೇತ್ರ ನೆನಪಾಗುವುದಿಲ್ಲ. ನಮ್ಮ ನಿಜ ಜೀವನದಲ್ಲಿ ಬೆಟ್ಟದಷ್ಟು ನೋವುಗಳಿದ್ದರೂ ಅದುಮಿಟ್ಟುಕೊಂಡು ಒಂದೊತ್ತಿನ ಊಟ ಮತ್ತು ಸಂಸಾರದ ನೌಕೆ ಸಾಗಿಸಬೇಕೆಂಬ ಒಂದೇ ಒಂದು ಉದ್ದೇಶದಿಂದ ಬಣ್ಣ ಬಳಿದು ಪರದೆ ಮುಂದೆ ನಿಂತು ಕಲೆ ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸುತ್ತೇವೆ. ಆದರೆ, ಪ್ರೇಕ್ಷಕರಿಂದ ಪ್ರೋತ್ಸಾಹ ಸಿಗುತ್ತಿಲ್ಲವೆಂಬ ಕೊರಗು ಕಲಾವಿದರಲ್ಲಿದೆ.