ಜಿಲ್ಲೆ

ಭರತನಾಟ್ಯ ಕಲೆ ಪ್ರೋತ್ಸಾಹ ಶ್ಲಾಘನೀಯ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ.ಗಾಯತ್ರಿ ಪ್ರಶಂಸೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಇಂದಿನ ತಾಂತ್ರಿಕತೆಯ ಯುಗದಲ್ಲಿ ಭರತನಾಟ್ಯದಂತಹ ಕಲಾ ಪ್ರಕಾರವನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ.ಗಾಯತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಪಿಇಎಸ್ ಕಾಲೇಜಿನ ವಿವೇಕಾನಂದ ರಂಗಮಂದಿರದಲ್ಲಿ ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ಹಮ್ಮಿಕೊಂಡಿದ್ದ ಗುರುದೇವೋತ್ಸವ ಶಾಸ್ತ್ರೀಯ  ನೃತ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ತಾಂತ್ರಿಕತೆ ಹೆಚ್ಚು ಬೆಳೆದಂತೆ ಕಲಾ ಪ್ರಕಾರ ಬೆಳೆಸುವುದು ಕಷ್ಟಕರ. ಜಿಲ್ಲೆಯಲ್ಲಿ ರೈತ ಸಂಸ್ಕೃತಿ ಹೆಚ್ಚು, ಇಲ್ಲಿ ಸಾಂಸ್ಕೃತಿಕ ಕಲಾ ಪ್ರಕಾರಗಳು ಕಡಿಮೆ. ಆದರೆ, ಚೇತನಾ ರಾಧಾಕೃಷ್ಣ ಅವರು ಪುಟ್ಟ ಪುಟ್ಟ ಮಕ್ಕಳಿಗೆ ನೃತ್ಯ ಕಲೆಯನ್ನು ಕಲಿಸಿ ಅವರಿಂದ ಭರತನಾಟ್ಯ ಪ್ರದರ್ಶಿಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು.

ಶಿಷ್ಯರು ಗುರುವಿಗೆ ಸಮನಾನವಾಗಿ ಬೆಳೆದಾಗ ಸಂತೋಷ, ಹೆಮ್ಮೆ, ತೃಪ್ತಿ ಸಿಗುತ್ತದೆ. ಡಾ. ಚೇತನಾ ಅವರ ಶಿಷ್ಯೆಯರು ರಾಜ್ಯ ಸೇರಿದಂತೆ ವಿದೇಶಗಳಲ್ಲಿ ನೃತ್ಯ ಶಾಲೆಗಳನ್ನು ತೆರೆದಿದ್ದಾರೆ. ಮಂಡ್ಯದಲ್ಲಿ ಭರತನಾಟ್ಯ ಕಲಾಪ್ರಕಾರಕ್ಕೆ ಹೆಚ್ಚು ಒತ್ತು ಕೊಟ್ಟು ಮಕ್ಕಳಿಗೆ ಕಲಿಸಿ, ತರಬೇತಿ ನೀಡಿ, ರಾಷ್ಟ ಮತ್ತು ಅಂತಾಷ್ಟ್ರೀಯ ಮಟ್ಟದಲ್ಲಿ ಮಂಡ್ಯ ಜಿಲ್ಲೆಯನ್ನು ಪ್ರತಿನಿಧಿಸುವಂತೆ ಮಾಡಲಿ. ಇಲ್ಲಿನ ಅನೇಕ ಪ್ರತಿಭೆಗಳು ಹೊರಬರಲಿ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಡಾ.ಚೇತನಾ ರಾಧಾಕೃಷ್ಣ ಅವರು ಸುಮಾರು 30 ವರ್ಷ ಸಾಧನೆಯ ಹಾದಿಯಲ್ಲಿ ನೂರಾರು ಮಕ್ಕಳ ಪ್ರತಿಭೆಯನ್ನು ಹೊರತಂದಿದ್ದಾರೆ. ಇನ್ನೂ ಹೆಚ್ಚಿನ ಪ್ರತಿಭೆಗಳನ್ನು ಹೊರತರುವ ಶಕ್ತಿಯನ್ನು ದೇವರು ನೀಡಲಿ. ಸಂಸ್ಕೃತಿ ಪ್ರತೀಕವಾಗಿರುವ ಭರತನಾಟ್ಯ, ಸಂಗೀತ, ಕಲೆಯನ್ನು ನಾವು ಉಳಿಸಿ ಬೆಳೆಸಬೇಕಾಗಿದೆ. ಆಧುನಿಕ ಜಗತ್ತಿನಲ್ಲಿ ಎಲ್ಲರೂ ನಾಗಾಲೋಟದಲ್ಲಿ ಓಡುತ್ತಿದ್ದು, ನಮ್ಮ ಸಂಸ್ಕೃತಿ, ಕಲೆಯನ್ನು ಮರೆಯುತ್ತಿದ್ದೇವೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಭರತನಾಟ್ಯ ಮನರಂಜನೆಗೆ ಮಾತ್ರ ಸೀಮಿತವಲ್ಲ, ಮನುಷ್ಯನನ್ನು ಪರಿಪೂರ್ಣನನ್ನಾಗಿಸುವ ಸಂಸ್ಕಾರ ಕಲಿಸುವ ಕಲೆಯಾಗಿದೆ ಎಂದು ಬಣ್ಣಿಸಿದರು.

ಮೈಸೂರಿನ ಎಸ್‌ಎಲ್ವಿ ಬುಕ್ ಪ್ರೈ ಲಿಮಿಟೆಡ್‌ನ ದಿವಾಕರ್ ದಾಸ, ನಗರಸಭಾ ಸದಸ್ಯ ಎಂ.ಎನ್.ಶ್ರೀಧರ್, ಅಕಾಡೆಮಿಯ ಕಲಾತ್ಮಕ ನಿರ್ದೇಶಕಿ ಡಾ.ಪಿ.ಎಂ.ಚೇತನಾ ರಾಧಾಕೃಷ್ಣ, ಸಂಸ್ಥಾಪಕ ನಿರ್ದೇಶಕ ಪಿ.ಎಂ.ರಾಧಾಕೃಷ್ಣ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕರ್ನಾಟಕ ಜನಪದ ಅಕಾಡೆಮಿ ಸದಸ್ಯ ಗೊರವಾಲೆ ಚಂದ್ರಶೇಖರ್ ಅವರಿಗೆ ‘ಗುರುದೇವ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೇದಿಕೆ ಕಾರ್ಯಕ್ರಮದ ನಂತರ ಅಕಾಡೆಮಿಯ ಕಿರಿಯ ಕಲಾವಿದರು ಸಮೂಹ ಭರತನಾಟ್ಯ ಹಾಗೂ ವಿವಿಧ ಕಲಾ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.