ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದಲ್ಲಿ ಆಯೋಜಿಸಿದ್ದ ಮಲೆಮಹದೇಶ್ವರ ದತ್ತಿ ಹಾಗೂ ಲಿಂಗೈಕ್ಯ ಶ್ರೀ ಗುರುಸ್ವಾಮೀಜಿ ಗುರುವಂದನಾ ಕಾರ್ಯಕ್ರಮವನ್ನು ಪೀಠಾಧಿಪತಿ ಡಾ. ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸಿದರು. ಎ.ಈ ರಘು, ಸ್ವಾಮಿ ಪೊನ್ನಾಚಿ, ನಾಗಭೂಷಣ, ಮಲ್ಲಿಕಾರ್ಜುನಸ್ವಾಮಿ ಇತರರು ಇದ್ದರು. 
ಜಿಲ್ಲೆ

ವೇದಾಗಮ ಪಾಠಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ

ಎ. ಆರ್. ರಘುರಾಮ

ವಿಜಯವಾಣಿ ಸುದ್ದಿಜಾಲ ಹನೂರು

ಸಂಸ್ಕೃತಿ, ಸಂಪ್ರದಾಯ, ಆಚಾರ ಮತ್ತು ವಿಚಾರಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವ ಜನರ ಮೇಲಿದೆ ಎಂದು ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ತಿಳಿಸಿದರು.

ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ವೇದಾಗಮ ಪಾಠಶಾಲೆಯ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಮಲೆಮಹದೇಶ್ವರ ದತ್ತಿ ಹಾಗೂ ಲಿಂಗೈಕ್ಯ ಶ್ರೀ ಗುರುಸ್ವಾಮೀಜಿ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ಪಾಶ್ಚಾತ್ಯ ಸಂಸ್ಕೃತಿಗೆ ಆಕರ್ಷಿರಾಗುತಿರುವುದು ಹೆಚ್ಚಾಗುತ್ತಿದೆ. ಪರಿಣಾಮ ನಮ್ಮ ಸ್ಥಳೀಯ ಸಂಸ್ಕೃತಿ, ಭಾಷೆ, ಆಚಾರಗಳು ಕ್ಷೀಣಿಸುತ್ತಿವೆ. ಇದರಿಂದ ಸಮಾಜಕ್ಕೆ ಮಾರಕವಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಯುವ ಜನರು ಸೇರಿದಂತೆ ಎಲ್ಲರೂ ನಮ್ಮ ಸನಾತನ ಸಂಸ್ಕೃತಿ ಮೈಗೂಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶರಣ ಸಾಹಿತ್ಯ ಪರಿಷತ್ ದಾನಿಗಳ ಸಹಾಯದಿಂದ ದತ್ತಿಗಳನ್ನು ಸ್ಥಾಪಿಸಿ ಯುವ ಪೀಳಿಗೆಯಲ್ಲಿ ಉಪನ್ಯಾಸದ ಮೂಲಕ ಜಾಗೃತಿ ಮೂಡಿಸುತ್ತಿರುವ ಸುತ್ತೂರು ಸಂಸ್ಥಾನದ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಕ್ಷರ ಜ್ಞಾನ ಬಿತ್ತಿದ ಸ್ವಾಮೀಜಿ: ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಮಲೆ ಮಹದೇಶ್ವರರು ಮಾಡಿದ ಕ್ರಾಂತಿ ಹಾಗೂ ಜನರಲ್ಲಿ ತಂದ ಸುಧಾರಣೆ ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಆದ್ದರಿಂದ ಮಹದೇಶ್ವರರ ಆದರ್ಶವನ್ನೇ ಸಾಲೂರು ಬೃಹನ್ಮಠದ ಲಿಂಗೈಕ್ಯ ಶ್ರೀ ಪಟ್ಟದ ಗುರುಸ್ವಾಮೀಜಿ ಅಳವಡಿಸಿಕೊಂಡು ಮಠವನ್ನು ಕಟ್ಟಿ ಬೆಳೆಸಿದರು. ಈ ಭಾಗದಲ್ಲಿ ಶಿಕ್ಷಣ, ದಾಸೋಹವನ್ನು ನೀಡಿ ಜನತೆಯಲ್ಲಿ ಅಕ್ಷರ ಜ್ಞಾನವನ್ನು ಬಿತ್ತಿದರು ಎಂದು ಸ್ಮರಿಸಿದರು.

ನಟ ನಾಗಭೂಷಣ ಮಾತನಾಡಿ, ಮಲೆ ಮಹದೇಶ್ವರರು ತಮ್ಮ ಪವಾಡಗಳ ಮೂಲಕ ಕ್ರಾಂತಿಯನ್ನೇ ಮಾಡಿದರು. ಇಂತಹ ಪವಾಡ ಪುರುಷರು ಎಲ್ಲರಿಗೂ ಆದರ್ಶವಾಗಬೇಕು. ಯುವಕರು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಜೀವನದಲ್ಲಿ ಸಾಧನೆ ಮಾಡಬೇಕು. ಹಾಗೆಯೇ ನಮ್ಮ ಸಂಸ್ಕೃತಿಯನ್ನು ಅಳವಡಿಸಿಕೊಂಡು ನಮ್ಮತನವನ್ನು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ಸಾಹಿತಿ ಸ್ವಾಮಿ ಪೊನ್ನಾಚಿ ಮಾತನಾಡಿ, ಶ್ರೀ ಮಹದೇಶ್ವರರು ಬೆಟ್ಟ, ಗುಡ್ಡಗಳನ್ನು ಅಲೆದು ಮೌಢ್ಯದ ಕತ್ತಲಲ್ಲಿ ಇದ್ದ ಜನತೆಯಲ್ಲಿ ಜಾಗೃತಿ ಮೂಡಿಸುವ ಮೂಲಕ ಅವರ ಬದುಕನ್ನು ಸುಧಾರಣೆ ಮಾಡಿದರು. ಹಾಗಾಗಿ ಮಹದೇಶ್ವರರು ಕೋಟ್ಯಂತರ ಭಕ್ತರಿಗೆ ಆರಾಧ್ಯ ದೈವ ಎನಿಸಿದ್ದಾರೆ. ಹಾಗೆಯೇ ಸಾಲೂರು ಪಟ್ಟದ ಮಠದ ಗುರುಸ್ವಾಮೀಜಿ ಈ ಭಾಗದಲ್ಲಿ ಶಾಲೆಗಳನ್ನು ತೆರೆದು ಶಿಕ್ಷಣದೊಂದಿಗೆ ದಾಸೋಹವನ್ನು ನೀಡಿ, ಶಿಕ್ಷಣ ದಾಸೋಹಿಗಳಾಗಿದ್ದಾರೆ ಎಂದರು.

ಸಾಲೂರು ಬೃಹನ್ಮಠ ಹಾಗೂ ಶಿಕ್ಷಣ ಸಂಸ್ಥೆಗಳ ವತಿಯಿಂದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿಗೆ ಲಿಂಗೈಕ್ಯ ಪಟ್ಟದ ಶ್ರೀ ಗುರುಸ್ವಾಮೀಜಿ ಹೆಸರಲ್ಲಿ ದತ್ತಿ ಸ್ಥಾಪನೆ ಮಾಡಿ 25 ಸಾವಿರ ರೂ. ಮೊತ್ತವನ್ನು ನೀಡಲಾಯಿತು. ದತ್ತಿ ದಾನಿಗಳಾದ ಚಾಮರಾಜನಗರ ಎಪಿಎಂಸಿ ಮಾಜಿ ನಿರ್ದೇಶಕ ಎಂ.ವಿಶ್ವನಾಥ್ ಅವರನ್ನು ಗೌರವಿಸಲಾಯಿತು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ದುಗ್ಗಟ್ಟಿ ಮಲ್ಲಿಕಾರ್ಜುನ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಿ.ಕೆ. ರವಿ ಕುಮಾರ್, ಪ್ರಾಂಶುಪಾಲ ಮಹದೇವಸ್ವಾಮಿ, ಬೇಡಗಂಪಣ ಮುಖಂಡರು, ಮಠದ ಭಕ್ತರು ಹಾಗೂ ವಿದ್ಯಾರ್ಥಿಗಳು ಇದ್ದರು.