ಕಿನ್ನಿಗೋಳಿ: ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿ ಯಾರೂ ಹಿಂದುಳಿಯ ಬಾರದು. ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ತತ್ವದಡ್ಲಿ ಸಾಧನೆ ಮಾಡಿದ ಮಹಾನ್ ಸಾಧಕ. ಅವರನ್ನು ನೆನಪಿಸುವುದು, ತತ್ವ ಆದರ್ಶಗಳನ್ನು ಮುಂದಿನ ಜನಾಂಗಕ್ಕೆ ಮುಟ್ಟಿಸುವ ಕೆಲಸ ಆಗಬೇಕಾಗಿದೆ ಎಂದು ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಶಂಕರ ಎ.ಕೋಟ್ಯಾನ್ ಹೇಳಿದರು.
ಕಿನ್ನಿಗೋಳಿ ಸಮೀಪದ ಎಸ್.ಕೋಡಿ ತೋಕೂರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮಾ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಮೂಲ್ಕಿ ಠಾಣೆಯ ಸಹಾಯ ನಿರೀಕ್ಷಕಿ ಅನಿತಾ ಎಚ್.ಬಿ., ಗೌರವಾಧ್ಯಕ್ಷ ಗುರುರಾಜ ಎಸ್.ಪೂಜಾರಿ, ಮಹಿಳಾ ವೇದಿಕೆ ಅಧ್ಯಕ್ಷೆ ಶಾಂತಾ ಕರ್ಕೇರ, ಯುವ ವೇದಿಕೆಯ ಅಧ್ಯಕ್ಷ ಪವನ್ ಕುಮಾರ್, ಹೇಮನಾಥ ಅಮೀನ್ ಮತ್ತಿತರರಿದ್ದರು.
ಸಂಸ್ಥೆಯ ಗೌರವಾಧ್ಯಕ್ಷ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುರಾಜ ಎಸ್.ಪೂಜಾರಿ ಸಹಿತ ಸಾಧಕಿ ಕ್ರೀಡಾ ಪಟು ಅಕ್ಷತಾ ಪೂಜಾರಿ ಬೋಳ ಅವರನ್ನು ಗೌರವಿಸಲಾಯಿತು. ಎಂಟು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ ವಿತರಣೆ, ಮೂವರು ಅಶಕ್ತರಿಗೆ ಆರೋಗ್ಯ ನಿಧಿ ನೀಡಲಾಯಿತು.
ಅಭಿಜಿತ್ ಸುವರ್ಣ ಪ್ರತಿಭಾ ಪುರಸ್ಕಾರದ ವಿವರ ನೀಡಿದರು. ಸುನೀತಾ ಗುರುರಾಜ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸಂಘದ ಅಧ್ಯಕ್ಷ ನವೀನ್ ಕುಮಾರ್ ಹರಿಪಾದೆ ಸ್ವಾಗತಿಸಿದರು. ಉಪಾಧ್ಯಕ್ಷ ಭಾಸ್ಕರ ಅಮೀನ್ ನಿರೂಪಿಸಿದರು. ಹೇಮನಾಥ ಅಮೀನ್ ವಂದಿಸಿದರು.