ಜಿಲ್ಲೆ

ಗುರು-ಶಿಷ್ಯ ಪರಂಪರೆ ಭಾರತೀಯ ಸಂಸ್ಕೃತಿಯ ಭಾಗ

ವಿಜಯವಾಣಿ ಸುದ್ದಿಜಾಲ ಧಾರವಾಡ

ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಗುರು-ಶಿಷ್ಯ ಪರಂಪರೆ ನಮ್ಮ ಸಂಸ್ಕೃತಿಯ ಬಹುಮುಖ್ಯ ಭಾಗ ಎಂದು ಹಿರಿಯ ಗಾಯಕ ಪಂ.ವೆಂಕಟೇಶಕುಮಾರ ಅಭಿಪ್ರಾಯಪಟ್ಟರು.

ನಗರದ ಸೃಜನಾ ರಂಗ ಮಂದಿರದಲ್ಲಿ ಸೃಷ್ಟಿ ರಸಿಕರ ರಂಗ ಪ್ರತಿಷ್ಠಾನ ಇತ್ತೀಚೆಗೆ ಆಯೋಜಿಸಿದ್ದ ಸೃಷ್ಟಿ ಸುರೇಶ ಅವರ ಗಂಡಾ ಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಾಚೀನ ಭಾರತದಲ್ಲಿ ವೇದಾಧ್ಯಯನ ಸೇರಿ ಎಲ್ಲ ಜ್ಞಾನವನ್ನು ಗುರುಕುಲದಲ್ಲೇ ಪಡೆಯಬೇಕಿತ್ತು. ಅಧ್ಯಯನ ಪೂರ್ಣಗೊಳಿಸಿದ ನಂತರ ಗುರುಗಳ ಅನುಮತಿ ಪಡೆದು ಅಲ್ಲಿಂದ ಹೊರಬರುತ್ತಿದ್ದರು. ಆಗ ಗುರು-ಶಿಷ್ಯರ ಸಂಬಂಧ ತಂದೆ, ಮಕ್ಕಳ ಸಂಬಂಧದಂತಿರುತ್ತಿತ್ತು. ಬದಲಾದ ಸಂದರ್ಭದಲ್ಲಿ ಈ ಸಂಬಂಧಗಳು ಮೌಲ್ಯ ಕಳೆದುಕೊಳ್ಳುತ್ತಿವೆ ಎಂದರು.

ಸಂಗೀತ ಕ್ಷೇತ್ರಕ್ಕೆ ಧಾರವಾಡ ಕೊಡುಗೆ ಅಪಾರ. ಮಹಾನ್​ ಸಂಗೀತಗಾರರು ತಮ್ಮ ಸಾಧನೆ ಮೂಲಕ ದೊಡ್ಡದೊಂದು ಪರಂಪರೆ ಸೃಷ್ಟಿಸಿ, ಕೊಡುಗೆಯಾಗಿ ನೀಡಿದ್ದಾರೆ. ಈ ಪರಂಪರೆ ಮುಂದುವರಿಸುವ ಹೊಣೆಗಾರಿಕೆ ಭವಿಷ್ಯದ ಕಲಾವಿದರ ಮೇಲಿದೆ. ಗುರುಗಳಿಂದ ಪಡೆದ ಜ್ಞಾನವನ್ನು ಸಮಾಜಮುಖಿಯಾಗಿ ಬಳಕೆ ಮಾಡಿ, ಪರಂಪರೆ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿಯನ್ನು ಉಸ್ತಾದ ಶಫೀಕಖಾನ ಅವರು ಈ ಕಾರ್ಯಕ್ರಮದ ಮೂಲಕ ಶಿಷ್ಯಳಿಗೆ ವಹಿಸಿಕೊಟ್ಟಿದ್ದಾರೆ ಎಂದರು.

ಉಸ್ತಾದ ಶಫೀಕಖಾನ ಅವರು ತಮ್ಮ ಶಿಷ್ಯೆ ಸೃಷ್ಟಿ ಸುರೇಶ ಅವರಿಗೆ ಪವಿತ್ರ ದಾರವನ್ನು ಕಟ್ಟುವ ಮೂಲಕ ನಾದ ಗುರು ದೀಕ್ಷೆ ನಡೆಸಿಕೊಟ್ಟರು. ನಂತರ ಗುರು-ಶಿಷ್ಯರು ರಾಗ ಪೂರಿಯಾ ನುಡಿಸಿ ಸಂಗೀತ ರಸಿಕರ ಮನಸೂರೆಗೊಳಿಸಿದರು. ಪಂ. ರವೀಂದ್ರ ಯಾವಗಲ್​ ತಬಲಾ ಸಾಥ್​ ನೀಡಿದರು. ಜಿ.ಸುರಭಿ ಶ್ಯಾಮ, ಪಂ. ಎಂ. ವೆಂಕಟೇಶಕುಮಾರ ಗಾಯನ ಪ್ರಸ್ತುತಪಡಿಸಿದರು. ಶ್ರೀಧರ ಮಾಂಡ್ರೆ ತಬಲಾ, ಬಸವರಾಜ ಹಿರೇಮಠ ಹಾಮೋರ್ನಿಯಂ ಸಾಥ್​ ನೀಡಿದರು.

ಸುರೇಖಾ ಸುರೇಶ, ಜಿ. ಸುರೇಶ ಗೋವಿಂದರೆಡ್ಡಿ, ಪಂ.ಬಿ.ಎಸ್​.ಮಠ ದಂಪತಿ, ಪಂ ರಘುನಾಥ ನಾಕೋಡ ದಂಪತಿ, ಪಂ.ಶ್ರೀಕಾಂತ ಕುಲಕರ್ಣಿ, ಇತರರು ಇದ್ದರು.