ಜಿಲ್ಲೆ

ಗುರುಶಿಷ್ಯ ಪರಂಪರೆಗಿದೆ ಮಹತ್ವ

ವಿಜಯವಾಣಿ ಸುದ್ದಿಜಾಲ ಧಾರವಾಡ

ಭಾರತೀಯ ಸಂಸ್ಕೃತಿಯಲ್ಲಿ ಗುರುಶಿಷ್ಯ ಪರಂಪರೆ ಮಹತ್ವದ್ದು. ಮೊದಲಿನ ಗುರುಗಳು ಶಿಷ್ಯನಲ್ಲಿ ಕಲಿಯುವ ಗುಣ, ತಾಳ್ಮೆ, ಸಹನಶೀಲತೆ ಪರಿಗಣಿಸಿ ಆರಂಭಿಕ ಶಿಕ್ಷಣವನ್ನು ಹಂತ ಹಂತವಾಗಿ ಕಠಿಣ ಪರಿಶ್ರಮದಿಂದ ಕಲಿಸುತ್ತಿದ್ದರು. ಹೀಗಾಗಿ ಅವರು ಎಲ್ಲ ಆಯಾಮಗಳಲ್ಲೂ ಪರಿಪೂರ್ಣರಾಗಲು ಸಾಧ್ಯವಾಗಿದೆ ಎಂದು ಸಿತಾರ ವಾದಕ ಉಸ್ತಾದ್​ ಶಫಿಕ್​ಖಾನ್​ ಹೇಳಿದರು.

ನಗರದ ರಂಗಾಯಣದ ಸುವರ್ಣ ಸಮುಚ್ಚಯ ಭವನದಲ್ಲಿ ಬೆಂಗಳೂರಿನ ಸಪ್ತಕ ಹಾಗೂ ಶ್ರುತಿನಂದನ ಸಂಸ್ಥೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ಗುರುನಮನ ಹಾಗೂ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಕಾಶ ಬಾಳಿಕಾಯಿ ಮಾತನಾಡಿ, ಗುರು ಎಂದೆಂದಿಗೂ ಪ್ರಾತಃಸ್ಮರಣೀಯರು. ಕಲಿಸಿದ ಎಲ್ಲ ಗುರುಗಳನ್ನು ಒಂದೇ ವೇದಿಕೆಯಡಿ ಸೇರಿಸಿ ಸನ್ಮಾನ ಮಾಡುವ ಮೂಲಕ ಗುರುನಮನ ಸಲ್ಲಿಸಿದ ಶ್ರುತಿನಂದನ ಸಂಸ್ಥೆ ಅಧ್ಯಕ್ಷ ರವಿ ಕಟ್ಟಿ ಅವರ ಕಾರ್ಯ ಶ್ಲಾನೀಯ ಎಂದರು.

ಪಂ. ವಿರುಪಾಯ್ಯ ಹಿರೇಮಠ, ಪಂ. ಹನುಮಂತ ಬುರ್ಲಿ ಹಾಗೂ ಪಂ. ರವಿಕಿರಣ ಮಣಿಪಾಲ್​ ಅವರಿಗೆ ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ಚಿಕ್ಕಮಠ, ವೇಣುಗೋಪಾಲ ಜೋಶಿ, ಸುರೇಖಾ ಸುರೇಶ, ರಾಧಾ ದೇಸಾಯಿ, ಪ್ರೊ. ಸುರೇಶ ಗುದಗನವರ, ಶೈಲಾ ಕರಗುದರಿ, ಪ್ರತಿಭಾ ಹೆಗಡೆ, ಕೃಷ್ಣಾ ಜೋಶಿ, ವೀರಣ್ಣ ಪತ್ತಾರ, ವಾದಿರಾಜ ಜೋಶಿ, ಡಾ.ಗುರುಬಸವ ಮಹಾಮನೆ, ಡಾ. ಎ.ಎಲ್​. ದೇಸಾಯಿ, ರಾವ ಕಮ್ಮಾರ, ಇತರರು ಇದ್ದರು.

ವಿದ್ಯಾಸಾಗರ ದಿಕ್ಷಿತ ನಿರೂಪಿಸಿದರು. ರವಿ ಕಟ್ಟಿ ಸ್ವಾಗತಿಸಿದರು. ಜಿ.ಎಸ್​.ಹೆಗಡೆ ವಂದಿಸಿದರು.