ಸವಣೂರ: ಲೋಕ ಕಲ್ಯಾಣಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡು ಕಾಯಕವೇ ಕೈಲಾಸವೆಂದು ಅಂಧರ ಬಾಳಿಗೆ ಬೆಳಕಾದ ಗುರು ಪುಟ್ಟರಾಜರ ಜೀವನ ಗಾಥೆಯನ್ನು ಅಳವಡಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಹಿರಿಯ ಕಲಾವಿದ ಬಡಿವೆಪ್ಪ ಆನವಟ್ಟಿ ಹೇಳಿದರು.
ಶ್ರೀ ಗುರು ಪುಟ್ಟರಾಜ ಕವಿ ಗವಾಯಿಗಳವರ 111ನೇ ಜನ್ಮ ದಿನೋತ್ಸವದ ಅಂಗವಾಗಿ ಹುರಳಿಕುಪ್ಪಿ ಗ್ರಾಮದ ಶ್ರೀ ವೀರಭದ್ರೇಶ್ವರ ಸಾಂಸ್ಕೃತಿಕ ಕಲಾ ತಂಡದ ವತಿಯಿಂದ ಪಟ್ಟಣದ ಕೀರ್ತಿ ಕಲಾ ಮತ್ತು ವಾಣಿಜ್ಯ ಪದವಿ ಮಹಾ ವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಕವಿಗೋಷ್ಠಿ, ಕವನ ವಾಚನ ಸ್ಪರ್ಧೆ ಹಾಗೂ ಜಾನಪದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನವ ಕುಲದ ಒಳಿತಿಗಾಗಿ ನಿರಂತರವಾಗಿ ಶ್ರಮಿಸಿದ ಸಾಧು, ಸಂತರು, ಸತ್ಪುರುಷರಲ್ಲಿ ಪುಟ್ಟರಾಜ ಕವಿ ಗವಾಯಿಗಳು ಒಬ್ಬರು. ಅವರ ಜೀವನ ಆದರ್ಶಮಯವಾದದ್ದು. ಇಂತಹ ಮಹಾನ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ತಮ ನೈತಿಕ ಮೌಲ್ಯಗಳನ್ನು ಬೆಳೆಸಬಹುದು ಎಂದರು.
ಪ್ರಾಚಾರ್ಯ ಮಾಲತೇಶ ದಾನಮ್ಮನವರ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಪ್ರಕಾಶಗೌಡ ಪರಪ್ಪಗೌಡ್ರ, ಚಂದ್ರಶೇಖರ ಕೃಷ್ಣಣ್ಣನವರ, ಬಸವರಾಜ ಪೂಜಾರ, ವೀರಯ್ಯ ಸಂಕಿನಮಠ, ಈರಣ್ಣ ಯಲಿಗಾರ, ಉಪನ್ಯಾಸಕರಾದ ಗೀತಾ ಕೂಡಲ, ಶಿಲ್ಪಾ ಕುನ್ನೂರ, ರಾಮನಗೌಡ ದ್ಯಾಮನಗೌಡ್ರ, ಶಬೀನಾ ಶೇಖಸನ್ನದಿ, ಅಮಿತ್ ಸರ್ವದೆ, ಸರಸ್ವತಿ ಮುಗಳಿ ಹಾಗೂ ಇತರರು ಪಾಲ್ಗೊಂಡಿದ್ದರು.
ಕವನ ವಾಚನ ಸ್ಪರ್ಧೆಯಲ್ಲಿ ಗುರುಮಾಂತಯ್ಯ ಆರಾಧ್ಯಮಠ ಪ್ರಥಮ, ಮಂಜುನಾಥ ಕುಲಕರ್ಣಿ ದ್ವಿತೀಯ, ಮೇಘನಾ ಟಿ.ಎಸ್., ತೃತೀಯ ಸ್ಥಾನ ಪಡೆದರು. ಶ್ರೀ ವೀರಭದ್ರೇಶ್ವರ ಸಾಂಸ್ಕೃತಿಕ ಕಲಾ ತಂಡದ ವತಿಯಿಂದ ಜಾನಪದ ಕಾರ್ಯಕ್ರಮ ಜರುಗಿತು. ಭಾಗ್ಯಶ್ರೀ ಹಣಗಿ, ಪವನಕುಮಾರ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.