ವಿಜಯಪುರ ಜ್ಞಾನಯೋಗಾಶ್ರಮದಲ್ಲಿ ಹಮ್ಮಿಕೊಂಡಿದ್ದ ಗುರುನಮನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ-ಅಸಂಖ್ಯಾತ ಭಕ್ತರನ್ನುದ್ಧೇಶಿಸಿ ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯಶಂಕರ ಮಾತನಾಡಿದರು.  
ಜಿಲ್ಲೆ

ಜ್ಞಾನಯೋಗಾಶ್ರಮದಲ್ಲಿ ಗುರುನಮನ ಕಾರ್ಯಕ್ರಮ, ಸಿದ್ಧೇಶ್ವರ ಶ್ರೀಗಳು ಅಭಿನವ ಸ್ವಾಮಿ ವಿವೇಕಾನಂದ ಎಂದ ರಾಜ್ಯಪಾಲ ಸಿ.ಎಚ್. ವಿಜಯಶಂಕರ

ವಿಜಯಪುರ: ದೇವರ ಹುಡುಕಾಟದಲ್ಲಿದ್ದ ಸ್ವಾಮಿ ವಿವೇಕಾನಂದರಿಗೆ ಗುರುವಾಗಿ ರಾಮಕೃಷ್ಣ ಪರಮಹಂಸರು ಸಿಕ್ಕರು. ಅದೇ ರೀತಿ ನಮ್ಮ ಪಾಲಿಗೆ ನಡೆದಾಡುವ ದೇವರಾಗಿ ಸಿದ್ಧೇಶ್ವರ ಸ್ವಾಮೀಜಿಗಳು ಸಿಕ್ಕರು. ಸಿದ್ಧೇಶ್ವರ ಸ್ವಾಮೀಜಿಗಳೆಂದೂ ಸರ್ಗದ ಕನಸು ಕಾಣಲಿಲ್ಲ. ಬದುಕನ್ನೇ ಸ್ವರ್ಗವಾಗಿಸಿಕೊಂಡರು. ಹೀಗಾಗಿ ಅವರೊಬ್ಬ ಅಭಿನವ ಸ್ವಾಮಿ ವಿವೇಕಾನಂದ ಎಂದು ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯಶಂಕರ ಬಣ್ಣಿಸಿದರು.

ಇಲ್ಲಿನ ಜ್ಞಾನಯೋಗಾಶ್ರಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಡೆದಾಡುವ ದೇವರು ಖ್ಯಾತಿಯ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗುರುವಿನ ಋಣ, ತಾಯಿಯ ಋಣ ತೀರಿಸಲಾಗದಂಥದ್ದು. ಸಿದ್ಧೇಶ್ವರ ಶ್ರೀಗಳು ನಮ್ಮ ಪಾಲಿಗೆ ಕೇವಲ ಗುರುವಾಗಿ ಕಾಣಿಸಲಿಲ್ಲ. ಬದಲಾಗಿ ಬದಲಾಗಿ ತಾಯಿಯ ಪ್ರೀತಿ, ಮಮತೆ ಕೂಡ ತೋರಿದ ಮಹನೀಯ. ಅವರದ್ದು ಮರೆಯದ ಬದುಕು. ಸ್ವಾಮಿ ವಿವೇಕಾನಂದರ ನಂತರದ ಶ್ರೇಷ್ಟ ಸಂತ ಸಿದ್ಧೇಶ್ವರ ಸ್ವಾಮೀಜಿ. ಸ್ವಾಮಿ ವಿವೇಕಾಂದರು ಸಿದ್ಧೇಶ್ವರ ಸ್ವಾಮೀಜಿ ರೂಪದಲ್ಲಿ ಕಾಣಿಸಿಕೊಂಡರು ಎಂದು ಹೇಳಿದರು.

ಸನಾತನ ಧರ್ಮ ರಕ್ಷಣೆ, ವಚನ ಸಾಹಿತ್ಯದ ಪ್ರಸಾರ ಕಾರ್ಯದಲ್ಲಿ ಶ್ರೀಗಳು ರಾಯಭಾರಿಗಳಂತೆ ಕಾರ್ಯನಿರ್ವಹಿಸಿದರು. ನುಡಿದಂತೆ ನಡೆದರು. ಎಲ್ಲ ಬಂಧನಗಳಿಂದ, ಕಾಲ ಪುರುಷನಿಂದ ಬಿಡುಗಡೆಯೇ ಸ್ವರ್ಗ. ಜನನ, ಮರಣ, ಸುಖ, ದುಖ ಎಂಬ ಕಾಲ ಚಕ್ರದಿಂದ ಬಿಡುಗಡೆ ಉದಾತ್ತ ಬದುಕು ಬದುಕಿದಾಗ ಮಾತ್ರ ಸಾಧ್ಯ, ಎಲ್ಲರೂ ಜೀವನ್ಮರಣದ ಚಕ್ರದಿಂದ ಮುಕ್ತವಾಗಲು ಹೋರಾಡಿ ಸ್ವರ್ಗ ಪ್ರಾಪ್ತಿಗಾಗಿ ಹೋರಾಡಿದರು, ಆದರೆ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ತಮಗೆ ಸಿಕ್ಕ ಬದುಕನ್ನೇ ಸ್ವರ್ಗ ಸಮಾನವಾಗಿ ಮಾಡಿದವರು ಎಂದರು.

ಕನ್ಹೇರಿಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಸಿದ್ಧೇಶ್ವರ ಶ್ರೀಗಳ ಒಂದೊಂದೇ ಮಾತು ಬದುಕಿನಲ್ಲಿ ಅಳವಡಿಸಿಕೊಂಡರೆ ಈ ನಾಡು ಬದಲಾಗುವುದರಲ್ಲಿ ಅನುಮಾನವೇ ಇಲ್ಲ. ಪೂಜ್ಯರು ನುಡಿದರು. ನುಡಿದಂತೆ ನಡೆದರು. ಶರೀರದ ರಕ್ಷಣೆಗೆ ಬಟ್ಟೆ ಹಾಕಿಕೊಂಡರೇ ವಿನಃ ಶರೀರದ ಶ್ರೀಮಂತಿಕೆ ಹೆಚ್ಚಿಸಲು ಅಲ್ಲ. ಇರುವ ಬಟ್ಟೆಯನ್ನೇ ಅದ್ಭುತವಾಗಿ ರಕ್ಷಣೆ ಮಾಡಿಕೊಂಡರು. ಎಷ್ಟು ಹಸಿವಿದೆಯೋ ಅಷ್ಟನ್ನೇ ಊಟ ಮಾಡುವುದು, ಬೇಗ ಮಲಗಿ ಬೇಗ ಏಳುವುದು, ಸರಳವಾಗಿ ಮತ್ತು ಸಹಜವಾಗಿ ಬದುಕುವುದು ಇಂಥ ಸಣ್ಣ ವಿಷಯಗಳೇ ನಾವು ಅಳವಡಿಸಿಕೊಂಡರೆ ಸಾಕು ಬದುಕು ಹಸನಾಗುವುದು ಎಂದರು.

ಯಾವುದೇ ಸಿದ್ಧಾಂತವಾಗಲಿ, ವಿಚಾರವಾಗಲಿ ಆ ಚೌಕಟ್ಟಿನಲ್ಲಿ ಅಳೆದು ತೂಗಿ ನೋಡಿದರೆ ಸೂಕ್ತ ಎನ್ನಿಸುವಂತಿದ್ದರು ಸಿದ್ಧೇಶ್ವರ ಸ್ವಾಮೀಜಿ. ಶರಣರ ವಚನಗಳನ್ನೇ ತೆದುಕೊಂಡರೆ ಬಸವಾದಿ ಶರಣರ ಆಶಯದಂತೆ ನಡೆದರು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ಜ್ಞಾನಿ, ಯೋಗಿ, ಭಕ್ತ, ಕರ್ಮಯೋಗಿ ಕುರಿತ ವಿಚಾರಗಳ ಪಡಿಯಚ್ಚಿನಲ್ಲಿ ನೋಡಿದರೂ ಸರಿ, ಉಪನಿಷತ್ತಿನ ಮಂತ್ರಗಳನ್ನು, ನಾರದ ಭಕ್ತಿ ಶಾಸ್ತ್ರ ಹಾಗೂ ಪಂತಂಜಲಿಯ ಯೋಗಸೂತ್ರ ಹೀಗೆ ಯಾವುದೇ ತತ್ವ ಸಿದ್ಧಾಂತದಡಿ ಅಳೆದು ತೋಗಿ ನೋಡಿದರೆ ಅದಕ್ಕೆ ಹೊಂದುವಂಥ ವ್ಯಕ್ತಿತ್ವ ಸಿದ್ಧೇಶ್ವರ ಸ್ವಾಮೀಜಿಗಳದ್ದಾಗಿತ್ತು. ಅವರು ಉಪನಿಷತ್‌ಗಳ ಬಗ್ಗೆ ಸಾಕಷ್ಟು ಉಪದೇಶ ನೀಡಿದ್ದಾರೆ. ಆದರೆ, ಆಚರಿಸಲು ಸಾಧ್ಯವಾಗದ ಯಾವ ಅಂಶವನ್ನೂ ಅವರು ಹೇಳಿಲ್ಲವೆಂದರು.

ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಗ್ರಾಮಗಳು ಸ್ವಚ್ಛ ಹಾಗೂ ಸಮೃದ್ಧವಾಗಬೇಕು ಎಂಬುದು ಸಿದ್ಧೇಶ್ವರ ಶ್ರೀಗಳ ಆಶಯವಾಗಿತ್ತು. ಈ ಆಶಯಗಳನ್ನು ಸಾಕಾರಗೊಳಿಸಲು ಶ್ರಮಿಸೋಣ ಎಂದರು.

ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಶ್ರೀಗಳು ಇಂದು ನಮ್ಮೊಂದಿಗಲ್ಲ; ಆದರೆ ನಮ್ಮೆಲ್ಲರ ಮನದಲ್ಲಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ನಮಗೆಲ್ಲ ಅಣ್ಣ ಬಸವಣ್ಣ, ಚೆನ್ನ ಬಸವಣ್ಣರವರಂತಹ ಮಹಾನುಭಾವರನ್ನು ನೋಡುವ ಪುಣ್ಯ ಲಭಿಸಲಿಲ್ಲ, ಆದರೆ ಅವರ ತದ್ರೂಪವೇ ಆಗಿದ್ದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳನ್ನು ನೋಡಿದ್ದೆ ನಮ್ಮ ಪುಣ್ಯ, ಸೂರ್ಯಚಂದ್ರ ಇರುವವರೆಗೂ ಸಿದ್ಧೇಶ್ವರ ಶ್ರೀಗಳ ಹೆಸರು ಚಿರಸ್ಥಾಯಿಯಾಗಿರಲಿದೆ ಎಂದರು.

ವಿಜಯಪುರ ಜಿಲ್ಲೆಯ ಸಮೃದ್ಧಿಯ ಬಗ್ಗೆ ಸಿದ್ಧೇಶ್ವರ ಸ್ವಾಮೀಜಿಗಳು ದೊಡ್ಡ ಕನಸು ಹೊಂದಿದ್ದರು, ಜಿಲ್ಲಾ ಪಂಚಾಯತ್ ಕಚೇರಿ ಪಕ್ಕದಲ್ಲಿರುವ ವನಶ್ರೀ ಆಶ್ರಮದಲ್ಲಿ ಅವರೊಂದು ದಿನ ಹೇಳಿದ ಮಾತು ಇನ್ನೂ ನೆನಪಿದೆ. ಎಂ.ಬಿ. ಪಾಟೀಲ, ಬಸನಗೌಡ ಪಾಟೀಲ ಮತ್ತಿತರರು ಇದ್ದರು. ಆಗ ಶ್ರೀಗಳು ‘ನೀವು ಎಲ್ಲ ಪಾಟೀಲರು ಶುದ್ದ ಆದರೆ ವಿಜಯಪುರ ತಾನೇ ಶುದ್ಧ ಆಗುತ್ತದೆ’ ಎಂದು ಮಾರ್ಮಿಕವಾಗಿ ನುಡಿದಿದ್ದರು. ಅದಕ್ಕಾಗಿಯೇ ನಾನು ತಿಕೋಟಾ ಬಿಟ್ಟು ಬಸನವ ಬಾಗೇವಾಡಿ ಮತಕ್ಷೇತ್ರಕ್ಕೆ ಹೋದೆ ಎಂದರು.

ಬಾಲ್ಕಿಯ ಚನ್ನಬಸವ ಪಟ್ಟದ್ಧೇಶ್ವರ ಸೇರಿದಂತೆ ಅನೇಕರು ಮಾತನಾಡಿದರು. ಆಶ್ರಮದ ಅಧ್ಯಕ್ಷ ಗುರು ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ವಿಠಲ ಕಟಕದೊಂಡ, ಮುಖಂಡರಾದ ವಿಜುಗೌಡ ಪಾಟೀಲ, ಮಾಜಿ ಶಾಸಕ ರಮೇಶ ಭೂಸನೂರ, ಮಾಜಿ ಸಚಿವರಾದ ಎಸ್.ಕೆ. ಬೆಳ್ಳುಬ್ಬಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮುಖಂಡರಾದ ಉಮೇಶ ಕಾರಜೋಳ, ವಿಠಲಗೌಡ ಯಶವಂತರಾಯಗೌಡ ಪಾಟೀಲ, ಸಂಜೀವ ಐಹೊಳಿ ಮತ್ತಿತರರಿದ್ದರು.

ಸಿದ್ಧೇಶ್ವರ ಶ್ರೀಗಳ ಪ್ರವಚನಗಳ ಪುಸ್ತಕ ಬಿಡುಗಡೆಗೊಳಿಸಲಾಯಿತು. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಿದ್ಧೇಶ್ವರ ಶ್ರೀಗಳ ಬದುಕು ಅನಾವರಣಗೊಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಛಾಯಾಚಿತ್ರ ಪ್ರದರ್ಶನವನ್ನು ಭಕ್ತರು ಕಣ್ತುಂಬಿಕೊಂಡರು.