ಚಿಕ್ಕಮಗಳೂರಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಬುಧವಾರ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಭಕ್ತಿ ಭಂಡಾರಿ ಶ್ರೀ ಬಸವೇಶ್ವರ ಜಯಂತ್ಯುತ್ಸವವನ್ನು ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಬಾಳೆಹೊನ್ನೂರು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು, ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬೇರುಗಂಡಿ ಬೃಹನ್ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಶಾಸಕ ಎಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಉಪಸ್ಥಿತರಿದ್ದರು. 
ಜಿಲ್ಲೆ

ಬಾಳಿನ ಭಾಗ್ಯೋದಯಕ್ಕೆ ಗುರು ಕಾರುಣ್ಯಮುಖ್ಯ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ಮನುಷ್ಯನ ಬಾಳಿಗೆ ಧರ್ಮ ಶಾಶ್ವತ ನಂದಾದೀಪ. ಸಮಸ್ತ ಭೋಗ ಮೋಕ್ಷಗಳಿಗೆ ಧರ್ಮವೇ ಮೂಲ. ಮಾನವ ಜೀವನವನ್ನು ಶುದ್ಧ ಸುಂದರಗೊಳಿಸುವುದೇ ಗುರುವಿನ ಧರ್ಮ. ಬಾಳಿನ ಭಾಗ್ಯೋದಯಕ್ಕೆ ಗುರು ಕಾರುಣ್ಯ ಮುಖ್ಯ ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಬುಧವಾರ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಭಕ್ತಿ ಭಂಡಾರಿ ಶ್ರೀ ಬಸವೇಶ್ವರ ಜಯಂತ್ಯುತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಭೌತಿಕ ಬದುಕಿಗೆ ಆಧ್ಯಾತ್ಮದ ಅರಿವು ಮುಖ್ಯ. ಮೌಲ್ಯಾಧಾರಿತ ಬದುಕಿಗೆ ಧರ್ಮಾಚರಣೆಯ ಅಗತ್ಯವಿದೆ. ಮಾನವನನ್ನು ಪರಿಪೂರ್ಣದೆಡೆಗೆ ಕರೆದೊಯ್ಯುವುದೇ ನಿಜವಾದ ಧರ್ಮ. ಹಣ ಕೆಟ್ಟ ಚಟ ಕಲಿಸುತ್ತದೆ. ಹಸಿವು ಬದುಕಿನ ಪಾಠ ಕಲಿಸುತ್ತದೆ. ಹಣ ಮಾನವೀಯತೆ ಮರೆಸಿದರೆ ಹಸಿವು ಅರಿವನ್ನು ಮೂಡಿಸುವ ಕಾರ್ಯ ಮಾಡುತ್ತದೆ. ಮನೆ ಅಂಗಳದ ಕಸ ಯಾರಾದರೂ ಹಸನಗೊಳಿಸಬಹುದು. ಆದರೆ ಮನದಂಗಳದ ಕಸವನ್ನು ನಾವೇ ಹಸನ ಮಾಡಿಕೊಳ್ಳಬೇಕಾಗುತ್ತದೆ ಎಂದರು.
ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಸಿದ್ಧಾಂತಗಳು ಮತ್ತು ಶ್ರೀ ಬಸವಣ್ಣನವರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆಗಳು ಜೀವ ಜಗತ್ತಿಗೆ ಸಂಜೀವಿನಿಯಾಗಿವೆ. ಫಲಭರಿತ ಬಾಳೆಯಂತೆ ಮನುಷ್ಯ ಬಾಗಬೇಕಲ್ಲದೇ ಬೀಗಬಾರದು. ದೇವರಿಗೆ ಕೊಡುವುದೂ ಗೊತ್ತು. ಕೊಟ್ಟಿದ್ದನ್ನು ಕಿತ್ತುಕೊಳ್ಳುವುದೂ ಗೊತ್ತು. ಆದ್ದರಿಂದ ಮನುಷ್ಯ ಗುರು ಹಿರಿಯರ ಮತ್ತು ಸಜ್ಜನ ಸತ್ಪುರುಷರ ಮಾರ್ಗದರ್ಶನದಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವ್ಯಕ್ತಿಗೆ ಕೊಳೆ ಅಂಟಿದರೆ ಶುದ್ಧ ಮಾಡಬಹುದು. ಆದರೆ ವ್ಯಕ್ತಿತ್ವವೇ ಕೊಳಕಾಗಿದ್ದರೆ ತೊಳೆಯುವುದು ಕಷ್ಟ. ಆದ್ದರಿಂದ ಶ್ರೀ ಗುರುವಿನ ಬೋಧಾಮೃತದಲ್ಲಿ ಮುನ್ನಡೆದು ಜೀವನ ಪಾವನಗೊಳಿಸಿಕೊಳ್ಳಬೇಕು ಎಂದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಜನ ಸಮುದಾಯದಲ್ಲಿ ಧಾರ್ಮಿಕ ಸದ್ಭಾವನೆ ಬೆಳೆದು ಬರಲು ಇಂಥ ಸಮಾರಂಭಗಳ ಅವಶ್ಯಕತೆಯಿದೆ. ಶ್ರೀ ಜಗದ್ಗುರು ರೇಣುಕರ-ಬಸವಣ್ಣನವರ ಚಿಂತನಗಳು ಸರ್ವ ಜನಾಂಗದ ಶ್ರೇಯೋಭಿವೃದ್ಧಿಗೆ ಸಹಕಾರಿಯಾಗುತ್ತವೆ. ಮತ್ತೊಮ್ಮೆ ಚಿಕ್ಕಮಗಳೂರು ನಗರದಲ್ಲಿ ಶ್ರೀ ರಂಭಾಪುರಿ ಪೀಠದ ದಸರಾ ದರ್ಬಾರ್ ನಡೆಸಬೇಕು ಎಂದು ರಂಭಾಪುರಿ ಶ್ರೀಗಳ ಬಳಿ ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಭಾರತೀಯ ಸಂಸ್ಕೃತಿ ಉತ್ಕೃಷ್ಠವಾದುದು. ಇರುವುದೊಂದೇ ಧರ್ಮ. ಇನ್ನುಳಿದವುಗಳೆಲ್ಲವೂ ಮತಗಳಾಗಿವೆ. ಮತವನ್ನೇ ಧರ್ಮವೆಂದು ಕೆಲವರು ತಿಳಿದಿದ್ದಾರೆ. ಧರ್ಮದ ದೂರದೃಷ್ಠಿ ಮತ್ತು ಅನೇಕ ದಾರ್ಶನಿಕರ ವಿಚಾರ ಧಾರೆಗಳು ಜನತೆಯ ಉನ್ನತಿಗೆ ಅವಶ್ಯಕವಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಟ್ರಸ್ಟಿನ ಉಪಾಧ್ಯಕ್ಷ ಎ.ಬಿ.ಸುದರ್ಶನ್ ಮಾತನಾಡಿ. ಜೀವನದಲ್ಲಿ ನಡೆ ನುಡಿಗಳು ಶುದ್ಧವಾಗಿರಬೇಕು. ಗುರಿಯತ್ತ ನಮ್ಮೆಲ್ಲರ ಗಮನ ಇರಬೇಕೇ ಹೊರತು ಸಮಸ್ಯೆ ಅಡೆತಡೆಯ ಮೇಲಲ್ಲ. ಶ್ರೀ ಜಗದ್ಗುರು ರೇಣುಕರ ಮತ್ತು ಬಸವಣ್ಣನವರ ಬೋಧನೆ ಸಾಧನೆಗಳು ನಮ್ಮೆಲ್ಲರ ಬಾಳಿಗೆ ಬೆಳಕು ತೋರುತ್ತವೆ ಎಂದರು.
ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬೇರುಗಂಡಿ ಬೃಹನ್ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಟ್ರಸ್ಟ್ ಗೌರವ ಕಾರ್ಯದರ್ಶಿ ಸಿ.ವಿ.ಮಲ್ಲಿಕಾರ್ಜುನ್, ಸದಸ್ಯರಾದ ಎಂ.ಡಿ.ಪುಟ್ಟಸ್ವಾಮಿ, ಎಸ್.ಎಂ.ದೇವಣ್ಣಗೌಡ, ಎ.ಎಸ್.ಸೋಮಶೇಖರಯ್ಯ, ಎಚ್.ಎಸ್.ನಂಜೇಗೌಡ, ಉಪಸ್ಥಿತರಿದ್ದರು.