ಜಿಲ್ಲೆ

ಎರಡು ದಶಕದಿಂದ ಕನಸಾಗೇ ಉಳಿದ ಗುರುಭವನ

ಗಂಗಾಧರ ಬಿ ವಿ

ಚನ್ನಪಟ್ಟಣದಲ್ಲಿ ಶಿಕ್ಷಕರ ಸಮುದಾಯ ಭವನ ನನೆಗುದಿಗೆ

* ಭರವಸೆಗಷ್ಟೇ ಸೀಮಿತ ಮಾಜಿ ಸಿಎಂ, ಡಿಸಿಎಂ

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ತಾಲೂಕಿನಲ್ಲಿ ಸುಸಜ್ಜಿತ ಗುರುಭವನ ನಿರ್ಮಾಣವಾಗಬೇಕೆಂಬ ಸಹಸ್ರಾರು ಶಿಕ್ಷಕರು ಕಂಡ ಕನಸು ಬರೋಬ್ಬರಿ ಎರಡು ದಶಕ ಪೂರೈಸಿದ್ದು, ನನಸಾಗದೆ ಕನಸಾಗಿಯೇ ಉಳಿದಿದೆ.

ಹೌದು...! ತಾಲೂಕಿನ ಶಿಕ್ಷಕರ ಅನುಕೂಲಕ್ಕಾಗಿ ಆರಂಭಗೊಂಡಿದ್ದ ಗುರುಭವನ (ಶಿಕ್ಷಕರ ಸಮುದಾಯ ಭವನ) ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದು ಎರಡು ದಶಕವಾಗಿದೆ. ಇದರಿಂದ ತಾಲೂಕಿನ ಶಿಕ್ಷಕರ ಚಟುವಟಿಕೆಗಳಿಗೆ ಸೂರಿಲ್ಲದಂತಾಗಿದ್ದು, ಭವನ ನಿರ್ಮಾಣಕ್ಕೆ ರಾಜಕಾರಣಿಗಳ ಇಚ್ಛಾಶಕ್ತಿ ಹಾಗೂ ಶಿಕ್ಷಕ ಸಂಘಟನೆಗಳ ಸಂಘಟನಾ ಕೊರತೆ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.

ನಗರದ ಜಿಕೆಎಂಪಿಎಸ್ ಶಾಲಾ ಆವರಣದಲ್ಲಿ (ಬಿಆರ್‌ಸಿ ಕೇಂದ್ರ) 2005ರಲ್ಲಿ ಸುಸಜ್ಜಿತ ಶಿಕ್ಷಕರ ಸಮುದಾಯ ಭವನಕ್ಕೆ ಅಂದೂ ಶಾಸಕರಾಗಿದ್ದ ಸಿ.ಪಿ.ಯೋಗೇಶ್ವರ್ ಅಧ್ಯಕ್ಷತೆಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಅದಕ್ಕೂ ಮೊದಲೇ ತಾಲೂಕಿನಲ್ಲಿ ಗುರುಭವನ ನಿರ್ಮಾಣವಾಗಿದ್ದ ಕಾರಣ ಶಿಕ್ಷಕರ ಸಮುದಾಯ ಭವನದ ಹೆಸರಿನಲ್ಲಿ ಬೃಹತ್ ಕಟ್ಟಡ ನಿರ್ಮಾಣ ಮಾಡಲು ರೂಪುರೇಷೆ ಸಿದ್ಧಪಡಿಸಲಾಗಿತ್ತು. ಆದರೆ, 20 ವರ್ಷ ಕಳೆದರೂ ಭವನ ನಿರ್ಮಾಣದ ಕಾರ್ಯ ಪ್ರಗತಿ ಕಂಡಿಲ್ಲ.

ಖಾಸಗಿ ಮಂಟಪವೇ ಗತಿ

ಉದ್ದೇಶಿತ ಶಿಕ್ಷಕರ ಸಮುದಾಯ ಭವನದ ಪಕ್ಕದಲ್ಲಿ ಆ ಕಾಲದಲ್ಲಿ ತಾಲೂಕಿನ ಶಿಕ್ಷಕ ಸಮುದಾಯ ಸ್ವತಃ ಹಣ ಹೊಂದಿಸಿಕೊಂಡು ಉತ್ತಮ ಭವನ ನಿರ್ಮಿಸಿಕೊಂಡಿದ್ದರು. ಭವನ ಶಿಕ್ಷಕರ ಚಟುವಟಿಕೆಗೆ ಸಿಮೀತವಾಗದೇ, ಭವನದಲ್ಲಿ ಮದುವೆ ಹಾಗೂ ಶುಭ ಸಮಾರಂಭಗಳೂ ನಡೆಯುತ್ತಿದ್ದವು, ಜಿಲ್ಲೆಯ ಅತ್ಯುತ್ತಮ ಗುರುಭವನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ, ಕಾಲಕ್ರಮೇಣ ಸೂಕ್ತ ನಿರ್ವಹಣೆ ಕೊರತೆ ಹಾಗೂ ಕಿಡಿಗೇಡಿಗಳಿಂದ ಗುರುಭವನ ಶಿಥಿಲಾವಸ್ಥೆ ತಲುಪಿದ್ದರಿಂದ ಇದಕ್ಕೆ ಪರ್ಯಾಯವಾಗಿ ಆರಂಭಗೊಂಡಿದ್ದೇ ಶಿಕ್ಷಕರ ಸಮುದಾಯ ಭವನ. ಆದರೆ, ಎರಡು ದಶಕಗಳಿಂದ ಯಾವ ಭವನವೂ ಇಲ್ಲದೇ ಶಿಕ್ಷಕ ಸಮುದಾಯ ತಮ್ಮ ಚಟುವಟಿಕೆ ನಡೆಸಲು ನೆಲೆ ಇಲ್ಲದ ಸ್ಥಿತಿ ಎದುರಾಗಿದ್ದು, ವರ್ಷಕೊಮ್ಮೆ ಶಿಕ್ಷಕರ ದಿನವನ್ನೂ ಖಾಸಗಿ ಕಲ್ಯಾಣ ಮಂಟಪದಲ್ಲಿ ಆಚರಿಸುವ ಅನಿವಾರ್ಯತೆ ಉಂಟಾಗಿದೆ.

ನನೆಗುದಿಗೆ ಬೀಳಲು ಕಾರಣ?

ನೂತನ ಭವನ ಕೇವಲ ಅಡಿಪಾಯಕ್ಕೆ ಸೀಮಿತವಾಗಿದ್ದು, ಈ ಅಡಿಪಾಯವೂ ಪ್ರಸ್ತುತ ಗಿಡಗಂಟಿ, ಪೊದೆಗಳಿಂದ ಆವೃತಗೊಂಡಿದೆ. ಭವನ ನನೆಗುದಿಗೆ ಬೀಳಲು ಕಾರಣವೇನು? ಅಡಿಪಾಯಕ್ಕೆ ಬಿಡುಗಡೆಯಾದ ಹಾಗೂ ಖರ್ಚಾದ ಮೊತ್ತವೇನು? ಹೀಗೆ ಈ ಭವನಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಶಿಕ್ಷಕರಿಗೆ ಇಲ್ಲವಾಗಿದೆ. ಈ ಹಿಂದಿನ ಗುರುಭವನ ಹಾಗೂ ಉದ್ದೇಶಿತ ಭವನದ ಅಡಿಪಾಯ ಎರಡನ್ನೂ ನೆಲಸಮಗೊಳಿಸಿ, ಶಿಕ್ಷಕರಿಗೆ ಒಂದು ಸೂರು ಕಲ್ಪಿಸಲು ಸಂಬಂಧಪಟ್ಟವರು ಮುಂದಾಗಬೇಕಿದೆ.

ಭಾಷಣಕ್ಕೆ ಸೀಮಿತವಾದ ಭರವಸೆ!

ಭವನ ನಿರ್ಮಾಣ ವಿಚಾರದಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ ಎ್ಲ ರಾಜಕೀಯ ನಾಯಕರು ಕೇವಲ ಭಾಷಣಕ್ಕೆ ಸೀಮಿತವಾಗಿದ್ದು, ಭವನಕ್ಕೆ ಶಂಕುಸ್ಥಾಪನೆ ಮಾಡಿದ ಅಂದಿನ ಶಾಸಕ ಹಾಗೂ ಪ್ರಸುತ್ತ ಶಾಸಕರೂ ಆಗಿರುವ ಸಿ.ಪಿ.ಯೋಗೇಶ್ವರ್ ಹೆಚ್ಚಾಗಿ ತಲೆಕೆಡಿಸಿಕೊಂಡಿಲ್ಲ ಎಂಬುದಕ್ಕೆ ಪಾಳುಬಿದ್ದಿರುವ ಭವನದ ಅಡಿಪಾಯವೇ ಸಾಕ್ಷಿ. ಇನ್ನೂ ಕ್ಷೇತ್ರದ ಬಗ್ಗೆ ಪ್ರತಿನಿಧಿಸಿ ಸಿಎಂ ಸಹ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಇನ್ನೊಂದು ವರ್ಷದೊಳಗೆ ಭವನ ನಿರ್ಮಿಸುವ ಭರವಸೆ ನೀಡಿದರೆ ವಿನಃ ಯಾವ ಬದಲಾವಣೆಯೂ ಆಗಿಲ್ಲ. ಇದಾದ ಬಳಿಕ ಉಪಚುನಾವಣೆ ಉದ್ದೇಶದಿಂದ ಕ್ಷೇತ್ರದಲ್ಲಿ ನಡೆದ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಶೀಘ್ರದಲ್ಲೇ ಗುರುಭವನ ನಿರ್ಮಾಣ ಮಾಡಿಕೊಡುತ್ತೇನೆ. ಇದರೊಂದಿಗೆ, ಶಿಕ್ಷಕರಿಗಾಗಿಯೇ ಬಡಾವಣೆಗಳನ್ನು ನಿರ್ಮಿಸಿ ಕೊಡುತ್ತೇವೆ ಎಂದು ಅಬ್ಬರದ ಭಾಷಣ ಮಾಡಿದ್ದರು. ಆದರೆ, ಅವರದೇ ಸರ್ಕಾರವಿದ್ದರೂ ಮಾತಿನಂತೆ ನಡೆದುಕೊಳ್ಳಲಿಲ್ಲ ಎಂದು ಶಿಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಗುರುಭವನ ನಿರ್ಮಾಣದ ವಿಚಾರದಲ್ಲಿ ಶಿಕ್ಷಕರ ಕ್ಷೇತ್ರವನ್ನು ಹಲವು ಬಾರಿ ಪ್ರತಿನಿಧಿಸಿದ, ತಾಲೂಕಿನವರೇ ಆದ ಎಂಎಲ್ಸಿ ಪುಟ್ಟಣ್ಣ ಸಹ ತವರೂರಿನ ಶಿಕ್ಷಕರಿಗೆ ಸೂರು ಕಲ್ಪಿಸಿಕೊಡಲು ಮನಸ್ಸು ಮಾಡದಿರುವ ಆರೋಪ ಕೇಳಿಬಂದಿದೆ.

ಸಂಘಟನಾ ಕೊರತೆ ಕಾರಣವೇ?

ಶಿಕ್ಷಕರ ಒಗ್ಗಟ್ಟು ಹಾಗೂ ಸಂಘಟನಾ ಕೊರತೆಯಿಂದ ಉದ್ದೇಶಿತ ಶಿಕ್ಷಕರ ಸಮುದಾಯ ಭವನ ನನೆಗುದಿಗೆ ಬೀಳಲು ಕಾರಣವಾಗಿದೆ. ಪ್ರಾಥಮಿಕ, ಪ್ರೌಢ, ಮಾಧ್ಯಮಿಕ, ಜತೆಗೆ ಜಾತಿವಾರಿನ ಹೆಸರಿನಲ್ಲಿಯೂ ಶಿಕ್ಷಕರ ಸಂಘಟನೆಗಳಿದ್ದು, ಭವನದ ವಿಚಾರದಲ್ಲಿ ಸರ್ಕಾರ ಹಾಗೂ ಜನಪ್ರತಿನಿಧಿಗಳ ಬೆನ್ನಿಗೆ ಒಗ್ಗಟ್ಟಾಗಿ ಇವರು ಬೀಳದಿರುವುದೇ ಭವನದ ಇಂದಿನ ಸ್ಥಿತಿಗೆ ಕಾರಣ.