ಜಿಲ್ಲೆ

ಗೃಹ ಆರೋಗ್ಯ ಯೋಜನೆಗಾಗಿ 185 ಕೋಟಿ ರೂ.

ಪಂಕಜ ಕೆ.ಎಂ.

ಬೆಂಗಳೂರು: ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸುವ ‘ಗೃಹ ಆರೋಗ್ಯ’ ಯೋಜನೆಯನ್ನು ರಾಜ್ಯಾದ್ಯಂತ ಅನುಷ್ಠಾನಕ್ಕೆ ತರಲು ಅಗತ್ಯವಿರುವ ಔಷಧ, ಉಪಕರಣಗಳಿಗಾಗಿ 185 ಕೋಟಿ ರೂ. ಅನುದಾನ ಬಳಕೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಕೆಎಸ್‌ಎಂಎಸ್‌ಸಿಎಲ್ ಅನುದಾನದಿಂದ 115.08 ಕೋಟಿ ರೂ., 15ನೇ ಹಣಕಾಸು ಆಯೋಗದ ಅನುದಾನದಿಂದ 40.70 ಕೋಟಿ ರೂ., ಕೆಎಸ್‌ಎಂಎಸ್‌ಸಿಎಲ್ ಉಳಿತಾಯದಿಂದ 29.95 ಕೋಟಿ ರೂ. ಸೇರಿ 185.74 ಕೋಟಿ ರೂ. ಬಳಕೆಗೆ ಅನುಮೋದನೆ ನೀಡಲಾಗಿದೆ. ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದು, ಕೋಲಾರ ಜಿಲ್ಲೆಯಲ್ಲಿ ಯೋಜನೆಯ ಪ್ರಾಯೋಗಿಕ ಯಶಸ್ಸಿನ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗಿದೆ. ಜೂನ್ ತಿಂಗಳ ಅಂತ್ಯದೊಳಗೆ ಎಲ್ಲ ಜಿಲ್ಲೆಗಳಲ್ಲಿ ತಪಾಸಣಾ ಕಾರ್ಯ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ. ಯೋಜನೆಯಡಿ ಆಶಾ ಕಾರ್ಯಕರ್ತೆಯರು ಮನೆ, ಮನೆಗೆ ತೆರಳಿ ಅಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ 30 ವರ್ಷ ಮೇಲ್ಪಟ್ಟವರನ್ನು ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ತಪಾಸಣೆಗೆ ಒಳಪಡಲು ನೆರವಾಗಲಿದ್ದಾರೆ. ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ಸೇರಿ 14 ಅಸಾಂಕ್ರಾಮಿಕ ರೋಗಗಳ ತಪಾಸಣೆ ನಡೆಸಲಿದ್ದಾರೆ ಎಂದಿದ್ದಾರೆ.