ಮೈಸೂರು: ದೇಶದಲ್ಲಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳಿಗೆ ಗನ್‌ಮನ್ ಭದ್ರತೆ ಕಲ್ಪಿಸುವ ಕಾಲ ದೂರ ಇಲ್ಲ ಎಂದು ಹೃದ್ರೋಗ ತಜ್ಞ, ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು
ಮೈವಿವಿ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗದ ವತಿಯಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಮೂರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೋಲ್ಕತದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಆಕೆಯ ದೇಹದ ಪ್ರತಿ ಅಂಗಕ್ಕೂ ಹಾನಿ ಮಾಡಲಾಗಿದೆ. ಇದು ಅಮಾನವೀಯ ಕೃತ್ಯ. ಜತೆಗೆ ಇದೇ ರೀತಿ ದೇಶಾದ್ಯಂತ ಆಸ್ಪತ್ರೆಗಳ ಮೇಲೆಯೂ ದಾಳಿ ಮಾಡಲಾಗುತ್ತಿದೆ. ವೈದ್ಯರ ಮೇಲೆಯೂ ಹಲ್ಲೆಗಳು, ಕೆಲ ಕಡೆ ಕೊಲೆಗಳೂ ಆಗಿವೆ. ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವೈದ್ಯರಿಗೆ ಭದ್ರತೆ ಕಲ್ಪಿಸಲು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ರಾತ್ರಿ ಹೊತ್ತು ಗನ್‌ಮನ್ ವ್ಯವಸ್ಥೆ ಮಾಡಲಾಗಿತ್ತು. ಈ ರೀತಿ ಘಟನೆಗಳಿಂದ ಇದು ದೇಶಾದ್ಯಂತ ಜಾರಿಗೆ ಬರುವ ಸಾಧ್ಯತೆ ಇದೆ ಎಂದರು.
ದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ಶೇ.35, ಖಾಸಗಿ ಆಸ್ಪತ್ರೆಗಳಲ್ಲಿ ಶೇ.65ರಷ್ಟು ಆರೋಗ್ಯ ಸೇವೆ ದೊರೆಯುತ್ತಿದೆ. ಮಹಿಳಾ ವೈದ್ಯರೇ ಹೆಚ್ಚಿದ್ದು, ಇವರ ಸಂಖ್ಯೆ ಶೇ.55ರಷ್ಟಿದ್ದರೆ, ಪುರುಷ ವೈದ್ಯರ ಸಂಖ್ಯೆ ಶೇ.45ರಷ್ಟಿದೆ. ವೈದ್ಯಕೀಯ ವಿದ್ಯಾರ್ಥಿಗಳು, ಕಿರಿಯ ವೈದ್ಯರೇ ಶೇ.30ರಷ್ಟು ಆಸ್ಪತ್ರೆಯ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಒತ್ತಡದಲ್ಲಿ ಕೆಲಸ ಮಾಡುವ ಇವರಿಗೆ ರಕ್ಷಣೆ ಒದಗಿಸದಿದ್ದರೆ ಇಡೀ ವೈದ್ಯಕೀಯ ವ್ಯವಸ್ಥೆ ಹದಗೆಡಲಿದೆ ಎಂದು ಎಚ್ಚರಿಸಿದರು.
ಬರೀ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಮಾತ್ರ ಆಸಕ್ತಿ ತೋರುವ ಸರ್ಕಾರಗಳು, ಸಿಬ್ಬಂದಿ ನೇಮಕಕ್ಕೆ ನಿರಾಸಕ್ತಿ ವ್ಯಕ್ತಪಡಿಸುತ್ತಿವೆ. ಇದರಿಂದ ರಾಷ್ಟ್ರ, ರಾಜ್ಯಗಳಲ್ಲಿ ಸರ್ಕಾರಿ ಆಸ್ಪತ್ರೆಗಳು ದಾರಿ ತಪ್ಪಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸೌಲಭ್ಯ ಕಲ್ಪಿಸಬೇಕು: ಕೇವಲ ಕಟ್ಟಡ ಉದ್ಘಾಟನೆ ಮಾಡಿದರೆ ಏನೂ ಪ್ರಯೋಜನವಾಗುವುದಿಲ್ಲ. ಉಪಕರಣ, ಸೌಲಭ್ಯ ಕಲ್ಪಿಸಿದರೆ ಚಿಕಿತ್ಸೆ ಕೊಡಲು ಆಗುವುದಿಲ್ಲ. ಅದಕ್ಕೆ ತಕ್ಕಂತೆ ವೈದ್ಯರು ಸೇರಿದಂತೆ ಇನ್ನಿತರ ಮಾನವ ಸಂಪನ್ಮೂಲವನ್ನೂ ನೇಮಿಸಬೇಕು. ಇಲ್ಲವಾದರೆ ಕಡಿಮೆ ದರದಲ್ಲಿ ಗುಣಮಟ್ಟ ಆರೋಗ್ಯ ಸೇವೆ ಜನರಿಗೆ ನೀಡಲಾಗುವುದಿಲ್ಲ. ಆದ್ದರಿಂದ ಸರ್ಕಾರ, ಅಧಿಕಾರಿಗಳ ಆಲೋಚನೆ ಬದಲಾಗಬೇಕು ಎಂದು ಸಲಹೆ ನೀಡಿದರು.
ನಕಾರಾತ್ಮಕ ಭಾವದವರು ಸಮಾಜದ ಭಯೋತ್ಪಾದಕರು. ಭಯೋತ್ಪಾದಕರು 50-100 ಜನರನ್ನು ಸಾಯಿಸಬಹುದು. ಆದರೆ ನಕಾರಾತ್ಮಕ ಭಾವದ ಭಯೋತ್ಪಾದಕರು ಇಡೀ ಸಮುದಾಯ, ಸಮಾಜವನ್ನೇ ಸಾಯಿಸುತ್ತಾರೆ. ಎಷ್ಟೇ ಬುದ್ಧಿವಂತರು ದೊಡ್ಡ ಹುದ್ದೆಯಲ್ಲಿದ್ದರೂ ಇಂತಹವರಿಂದ ಸಮಾಜ, ಸಂಸ್ಥೆಗಳು ಪ್ರಗತಿ ಆಗುವುದಿಲ್ಲ. ಒಂದು ನಿಮಿಷದ ಕೆಲಸಕ್ಕೆ ಇವರು ಒಂದು ವರ್ಷ ತೆಗೆದುಕೊಳ್ಳುತ್ತಾರೆ ಎಂದರು.
ಮೈವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ ಮಾತನಾಡಿ, ಮೊಬೈಲ್‌ಗೆ ದಾಸರಾಗಿರುವ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ. ಓದಿನಿಂದ ಜ್ಞಾನ ವಿಸ್ತಾರವಾಗಿ, ತಿಳವಳಿಕೆ ವೃದ್ಧಿಯಾಗುತ್ತದೆ. ತಮ್ಮ ಕಾರ್ಯಕ್ಷೇತ್ರದಲ್ಲಿ ಕೌಶಲ ಪಡೆದುಕೊಳ್ಳಲೂ ಅನುಕೂಲವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಡಾ.ಸುಕನ್ಯಾ ಸೂನಗಹಳ್ಳಿ ಸಂಪಾದಿಸಿರುವ ಡಾ.ಸಿ.ಎನ್.ಮಂಜುನಾಥ್ ಅವರ ಅಭಿನಂದನಾ ಗ್ರಂಥ ‘ಆಧುನಿಕ ಧನ್ವಂತರಿ’, ಲೇಖಕಿ ಡಾ.ಸತ್ತೂರು ಎಸ್.ಮಾಲಿನಿ ಅವರ ಪುರುಷರ ಲೈಂಗಿಕ ಆರೋಗ್ಯ, ಮಹಿಳೆಯರ ಲೈಂಗಿಕ ಆರೋಗ್ಯ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ಮೆಡಿವೇವ್ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಶರತ್‌ಕುಮಾರ್, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ ಇದ್ದರು.
ಬದಲಾದ ಜೀವನಶೈಲಿಯಿಂದಲೇ ಶೇ.60ರಷ್ಟು ಕಾಯಿಲೆ ಬರುತ್ತಿವೆ. ಹೃದಯ ಸಂಬಂಧಿರೋಗಗಳು, ಅಧಿಕ ರಕ್ತದೊತ್ತಡ, ಮಧುಮೇಹ, ಪಾರ್ಶ್ವವಾಯು ಕಾಯಿಲೆಗೂ ಕಾರಣವಾಗುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ಸ್ಕ್ರೀನ್ ಆಡಿಷನ್. ಮೊಬೈಲ್, ಲ್ಯಾಪ್‌ಟಾಪ್ ಅತಿಯಾದ ಬಳಕೆಯೂ ಕಾಯಿಲೆಯಂತಾಗಿದೆ ಎಂದು ಡಾ.ಮಂಜುನಾಥ್ ಹೇಳಿದರು.
ವಾಟ್ಸ್‌ಆ್ಯಪ್ ಇದೀಗ ದೊಡ್ಡ ವಿಶ್ವವಿದ್ಯಾಲಯವಾಗಿದ್ದು, ಸಾಮಾಜಿಕ ಜಾಲತಾಣಗಳು ಇಡೀ ಸಮಾಜವನ್ನೇ ಜಾಲಾಡುತ್ತಿವೆ. ಮಾನಸಿಕ ರೋಗದ ಕುರಿತು ಆಸ್ಪತ್ರೆಯಲ್ಲಿ ಅಧ್ಯಯನ ಮಾಡಬೇಕಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳು, ಪ್ರತಿಕ್ರಿಯೆಗಳ ಮೇಲೆ ಕಣ್ಣು ಹಾಯಿಸಿದರೆ ಎಷ್ಟು ಜನ ಮಾನಸಿಕರಾಗಿ ಅಸ್ವಸ್ಥರಾಗಿದ್ದಾರೆ ಎಂಬುದು ಗೊತ್ತಾಗುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಹೀರೋಗಳನ್ನು ಜೀರೋಗಳಾಗಿ ಮಾಡಿದ್ದರೆ, ಜೀರೋಗಳನ್ನು ಹೀರೋಗಳಾಗಿಯೂ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಚಿವ ಸಂಪುಟಕ್ಕಿಂತ ಕೇಸ್ ವರ್ಕರ್ಸ್ ಪವರ್‌ಫುಲ್ ಆಗಿದ್ದಾರೆ. ಸಂಪುಟ ಅನುಮತಿ ಕೊಟ್ಟರೂ ಕೇಸ್ ವರ್ಕರ್ಸ್ ಆಗಲ್ಲ ಎಂದು ಬರೆಯುತ್ತಾರೆ. ಆಸ್ಪತ್ರೆ, ವಿಶ್ವವಿದ್ಯಾಲಯಗಳಿಗೆ ಸಿಬ್ಬಂದಿ ಕೊಡಿ ಎಂದು ಭಿಕ್ಷೆ ಬೇಡುವ ದುಸ್ಥಿತಿ ಬಂದಿದೆ. ಆರೋಗ್ಯ ಮತ್ತು ಶಿಕ್ಷಣ ದೇಶದ ಭವಿಷ್ಯದ ಕಣ್ಣುಗಳು. ಆದರೆ ಇವುಗಳಿಗೆ ಜಿಡಿಪಿಯಲ್ಲಿ ಶೇ.2ರಷ್ಟು ಮಾತ್ರ ಅನುದಾನ ನೀಡುತ್ತಿದ್ದು, ಇದು ಶೇ.4ಕ್ಕೆ ಹೆಚ್ಚಿಸಬೇಕು.ಡಾ.ಸಿ.ಎನ್.ಮಂಜುನಾಥ್ ಸಂಸದ