ಗುಂಡ್ಲುಪೇಟೆ : ಪಟ್ಟಣದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಸೋಮವಾರ ನಸುಕಿನಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು. ಅಯ್ಯಪ್ಪ ಸ್ವಾಮಿ ದೇವಾಲಯ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕೊಂಡ ಮತ್ತು ಜಾತ್ರಾ ಮಹೋತ್ಸವವನ್ನು ಮೂರು ದಿನಗಳ ಕಾಲ ನಡೆಸಲಾಯಿತು. ಸಮಾರೋಪ ಅಂಗವಾಗಿ ಸೋಮವಾರ ಅಯ್ಯಪ್ಪ ಸ್ವಾಮಿಯವರ ಬೆಳ್ಳಿ ಉತ್ಸವ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.ಮಹೋತ್ಸವದ ಪ್ರಯುಕ್ತ ಅಯ್ಯಪ್ಪ ಸ್ವಾಮಿ ಸನ್ನಿಧಿಯನ್ನು ತಳಿರು- ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.
ಸೋಮವಾರ ಮುಂಜಾನೆ ಶ್ರೀ ಅಯ್ಯಪ್ಪ ಮಾಲಾಧಾರಿಗಳು ಕೊಂಡ ಹಾಯುವುದರೊಂದಿಗೆ ಮೂರು ದಿನಗಳ ಮಹೋತ್ಸವಕ್ಕೆ ಮಂಗಳ ಹಾಡಿದರು. ಪಟ್ಟಣದ ನೂರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಧನ್ಯತೆ ಮೆರೆದರು.