ಜಿಲ್ಲೆ

ಗೋಪಾಲಸ್ವಾಮಿ ಬೆಟ್ಟದಲ್ಲಿ ಪ್ರವಾಸಿಗರ ಪರದಾಟ

ಕಿರಣ್ ಮಾದರಹಳ್ಳಿ

ಗುಂಡ್ಲುಪೇಟೆ: ವಾರಾಂತ್ಯ ಹಾಗೂ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ದಂಡು ಹರಿದು ಬರುತ್ತಿದ್ದರೂ ಸಾರಿಗೆ ಸಂಸ್ಥೆ ಸಮರ್ಪಕ ಬಸ್ ಸೌಕರ್ಯ ಕಲ್ಪಿಸದ ಪರಿಣಾಮ ಪರದಾಡುವಂತಾಗಿದೆ ಎಂದು ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾನುವಾರ ಬೆಳಗ್ಗೆ ಕಿ.ಮೀ. ಗಟ್ಟಲೇ ಪ್ರವಾಸಿಗರು ಕಾದು ನಿಂತಿದ್ದರೂ ಸಾರಿಗೆ ಸಂಸ್ಥೆ ಕಡಿಮೆ ಬಸ್‌ಗಳನ್ನು ನಿಯೋಜಿಸಿದ್ದರಿಂದ ಬೆಟ್ಟಕ್ಕೆ ಹೋಗುವ ಪ್ರಯಾಣಿಕರು ಪರದಾಡಿದರು. ಶನಿವಾರ, ಭಾನುವಾರ ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಊಟಿ ಹಾಗೂ ಬಂಡೀಪುರದತ್ತ ಬರುವ ಬಹುತೇಕ ಪ್ರವಾಸಿಗರು ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೂ ಭೇಟಿ ನೀಡುತ್ತಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿರುವ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ ಪ್ರವಾಸಿಗರು ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿಯೇ ಹೋಗಬೇಕಾಗಿದೆ. ಪ್ರತಿ ದಿನವೂ ಪ್ರವಾಸಿಗರ ಸಂಖ್ಯೆಗನುಗುಣವಾಗಿ ಸಾಮಾನ್ಯ ದಿನಗಳಲ್ಲಿ ಎರಡರಿಂದ ಮೂರು, ರಜೆ ದಿನಗಳಲ್ಲಿ 6-7 ಬಸ್‌ಗಳನ್ನು ನಿಯೋಜಿಸಲಾಗುತ್ತಿದೆ. ಆದರೆ ಸಾಲು ಸಾಲು ರಜೆಗಳ ಸಂದರ್ಭದಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಏಕಕಾಲದಲ್ಲಿ ಸಾವಿರಾರು ಪ್ರಯಾಸಿಗರು ಆಗಮಿಸುವುದರಿಂದ ನೂಕುನುಗ್ಗಲು ಉಂಟಾಗುತ್ತಿದೆ.

ಕಳೆದ ವರ್ಷ ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭಿಸಿದ ನಂತರ ಎಲ್ಲ ದಿನಗಳಲ್ಲಿಯೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಎರಡು, ಮೂರು ದಿನಗಳು ರಜೆ ಸಿಕ್ಕ ಸಂದರ್ಭದಲ್ಲಿ ರಾಜ್ಯದ ನಾನಾ ಮೂಲೆಗಳಿಂದ ಮಹಿಳೆಯರ ದಂಡೇ ಹರಿದು ಬರುತ್ತಿದೆ. ಆದರೂ ಸಾರಿಗೆ ಸಂಸ್ಥೆಯು ಮಾತ್ರ ಹೆಚ್ಚುವರಿ ಬಸ್ ಸೌಕರ್ಯ ಕಲ್ಪಿಸದ ಪರಿಣಾಮ ಬೆಟ್ಟಕ್ಕೆ ಹೋಗುವ ಪ್ರವಾಸಿಗರು ಗಂಟೆಗಟ್ಟಲೆ ಬಸ್ಸಿಗಾಗಿ ಕಾಯುವಂತಾಗಿದೆ.
ಆದ್ದರಿಂದ ಇನ್ನಾದರೂ ಸಾರಿಗೆ ಸಂಸ್ಥೆ ಬೆಟ್ಟಕ್ಕೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.