ಜಿಲ್ಲೆ

ಗ್ರಾಪಂ ನೌಕರರ ಬೇಡಿಕೆ ಈಡೇರಿಸದಿದ್ದರೆ ಮುಷ್ಕರದ ಎಚ್ಚರಿಕೆ

ಕಿರಣ್ ಮಾದರಹಳ್ಳಿ

ಗುಂಡ್ಲುಪೇಟೆ: ಗ್ರಾಮ ಪಂಚಾಯಿತಿ ನೌಕರರ ಹಲವಾರು ಬೇಡಿಕೆಗಳನ್ನು ಜು.22ರ ಒಳಗೆ ಈಡೇರಿಸದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗುವುದು ಎಂದು ಗ್ರಾಮ ಪಂಚಾಯಿತಿ ನೌಕರರ ಜಿಲ್ಲಾಧ್ಯಕ್ಷ ಬರಗಿ ಸಿದ್ದರಾಜು ಹೇಳಿದರು.

ಪಟ್ಟಣದ ಲ್ಯಾಂಪ್ಸ್ ಸೊಸೈಟಿಯಲ್ಲಿ ಸಿಐಟಿಯು ಸಂಘಟನೆಯ ವತಿಯಿಂದ ಶನಿವಾರ ಹಾಗೂ ಭಾನುವಾರ ಆಯೋಜಿಸಿದ್ದ ಎರಡು ದಿನಗಳ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಅವರು ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ನೌಕರರ ಸಮಸ್ಯೆಗಳ ಈಡೇರಿಕೆ ಒತ್ತಾಯಿಸಿ ಸಂಘವು ಹೋರಾಟ ನಡೆಸಿದ ಪರಿಣಾಮ ಸರ್ಕಾರ ಅವುಗಳಲ್ಲಿ ಕೆಲವು ಬೇಡಿಕೆಗಳನ್ನು ಈಡೇರಿಸಲು ಒಪ್ಪಿಗೆ ನೀಡಿದ್ದರೂ ಹಣಕಾಸು ಇಲಾಖೆಯಲ್ಲಿ ನನೆಗುದಿಗೆ ಬಿದ್ದಿವೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಘಟಕ ಅಧ್ಯಕ್ಷ ನಾಡಗೌಡರ ಅಧ್ಯಕ್ಷತೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆ ಹಾಗೂ ಪ್ರತಿ ತಾಲೂಕಿನ ಪ್ರತಿನಿಧಿಗಳ ಎರಡು ದಿನದ ಕಾರ್ಯಾಗಾರದಲ್ಲಿ ನೌಕರರ ನಾನಾ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.

ಗ್ರಾಮ ಪಂಚಾಯಿತಿಗಳ ಉನ್ನತೀಕರಣ, ಉದ್ಯೋಗ ಸೃಷ್ಟಿ, ನೌಕರರಿಗೆ ಕನಿಷ್ಠ ವೇತನ ನೀಡಿಕೆ, ಸೇವಾ ಜೇಷ್ಠತೆ ಆಧಾರದ ಮೇಲೆ ಮುಂಬಡ್ತಿ, ನಿವೃತ್ತಿ ಹೊಂದಿದವರಿಗೆ ಪೆನ್ಷನ್, ವೈದ್ಯಕೀಯ ಸವಲತ್ತುಗಳನ್ನು ನೀಡಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು ಜು..22ರ ಗಡುವು ನೀಡಲಾಗಿದೆ. ಸರ್ಕಾರ ಈ ಬಗ್ಗೆ ಸ್ಪಂದಿಸದಿದ್ದಲ್ಲಿ ಜುಲೈ 23ರಿಂದ ಎಲ್ಲ ಬೇಡಿಕೆಗಳು ಈಡೇರುವವರೆಗೆ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ರಾಮಕೃಷ್ಣ, ಖಜಾಂಚಿ, ಬಸವರಾಜು, ಜಿಲ್ಲಾ ಉಪಾಧ್ಯಕ್ಷ ಮಲ್ಲು, ಮಾಜಿ ಅಧ್ಯಕ್ಷ ಕೊತ್ತಲವಾಡಿ ಮಹದೇವಸ್ವಾಮಿ, ತಾಲೂಕು ಅಧ್ಯಕ್ಷ ಮಹೇಂದ್ರ, ಮಾಜಿ ಅಧ್ಯಕ್ಷ ತೆರಕಣಾಂಬಿ ಮಂಜು, ಚಾಮರಾಜನಗರ ತಾಲೂಕು ಅಧ್ಯಕ್ಷ ಕೃಷ್ಣ, ಯಳಂದೂರು ತಾಲೂಕು ಅಧ್ಯಕ್ಷೆ ಮಹದೇವಮ್ಮ, ಪೌರಕಾರ್ಮಿಕರ ಜಿಲ್ಲಾಧ್ಯಕ್ಷ ಆರ್ಮುಗಂ, ನಿರ್ದೇಶಕರಾದ ರಾಜಪ್ಪ, ಶಿವಮ್ಮ, ಶಿವಶಂಕರಪ್ಪ, ಸುನಿಲ್ ಹಾಗೂ ಇತರರು ಇದ್ದರು.