ಜಿಲ್ಲೆ

ಬೆಳ್ಳಿ ಪದಕ ವಿಜೇತರಿಗೆ ಅಭಿನಂದನೆ

ಗುಂಡ್ಲುಪೇಟೆ: ಮೈಸೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮೈಸೂರು ವಿಶ್ವವಿದ್ಯಾನಿಲಯ ಅಂತರ್ ವಲಯಗಳ ಮಹಿಳಾ ಕ್ರೀಡಾಕೂಟದಲ್ಲಿ ಥ್ರೋಬಾಲ್‌ನಲ್ಲಿ ಬೆಳ್ಳಿಯ ಪದಕ ಗಳಿಸಿದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರನ್ನು ಅಭಿನಂದಿಸಲಾಯಿತು.

ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಎ.ಆರ್. ಮದನ್‌ಕುಮಾರ್ ಮಾತನಾಡಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಚಂದ್ರಶೇಖರ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಪ್ರದೇಶದ ಕಾಲೇಜು ವಿದ್ಯಾರ್ಥಿಗಳು ಪರಿಶ್ರಮ ಮತ್ತು ಸತತ ಅಭ್ಯಾಸದಿಂದ ಎಲ್ಲ ಸ್ಪರ್ಧೆಗಳಲ್ಲಿಯೂ ಭಾಗವಹಿಸಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ವಿಶ್ವವಿದ್ಯಾನಿಲಯ ಆಯೋಜಿಸುತ್ತಿರುವ ಎಲ್ಲ ಅಂತರ್ ಕಾಲೇಜು ಮಟ್ಟದ ಸ್ಪರ್ಧೆಗಳಲ್ಲಿ ಜಯಗಳಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಥ್ರೋ ಬಾಲ್ ತಂಡದ ನಾಯಕಿ ಸುಪ್ರಿಯಾ, ಉಪ ನಾಯಕಿಯಾಗಿ ತುಳಸಿ, ರಂಜಿತಾ, ಸುಚಿತ್ರಾ, ಶಿವಮ್ಮ, ಪುಟ್ಟಮ್ಮ, ಚೈತ್ರಾ, ಲಕ್ಷ್ಮೀ, ಮಹಾಲಕ್ಷ್ಮೀ, ರೋಜಾ, ಸಂಧ್ಯಾರಾಣಿ, ಅನಿತಾ, ಸಂಗೀತಾ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಪ್ರಾಧ್ಯಾಪಕ ಕೆ. ಚಾಮರಾಜು, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕೆ.ಚಂದ್ರಶೇಖರ್, ಕ್ರೀಡಾ ಸಮಿತಿ ಸದಸ್ಯರು, ಕಾಲೇಜಿನ ಅಧ್ಯಾಪಕರು ಹಾಗೂ ಸಿಬ್ಬಂದಿ ಇದ್ದರು.