ಗುಂಡ್ಲುಪೇಟೆ: ಬಂಡೀಪುರಕ್ಕೆ ನೂತನ ಅರಣ್ಯ ಸಂರಕ್ಷಣಾಧಿಕಾರಿಯಾಗಿ ನೇಮಕವಾಗಿರುವ ಪ್ರಭಾಕರನ್ ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಪಿ.ರಮೇಶ್ ಕುಮಾರ್ ಅವರನ್ನು ರಾಜ್ಯ ಸರ್ಕಾರ ವರ್ಗಾಯಿಸಿತ್ತು. ಈ ಸ್ಥಾನಕ್ಕೆ ನಿಯೋಜನೆಯಾಗಿದ್ದ ಪ್ರಭಾಕರನ್ ಮರುದಿನವೇ ಮದ್ದೂರಿನಲ್ಲಿ ಗಜಪಯಣಕ್ಕೆ ಸೆಪ್ಟೆಂಬರ್ 30ರಂದು ಚಾಲನೆ ನೀಡಿದ್ದರು.
ಅದೇ ದಿನ ರಮೆಶ್ ಕುಮಾರ್ ತಮ್ಮನ್ನು ಅವಧಿಪೂರ್ವದಲ್ಲಿಯೇ (2 ವರ್ಷಕ್ಕೂ ಮೊದಲೇ) ವರ್ಗಾಯಿಸಿದ ಬಗ್ಗೆ ಕೇಂದ್ರಿಯ ಆಡಳಿತ ಮಂಡಳಿ(ಸಿಎಟಿ) ಮೊರೆಹೋಗಿ ಸರ್ಕಾರದ ಆದೇಶಕ್ಕೆ ತಡೆ ತಂದಿದ್ದರು. ಸುದೀರ್ಘ ವಿಚಾರಣೆ ನಂತರ ಸೋಮವಾರ ಕೇಂದ್ರಿಯ ಆಡಳಿತ ಮಂಡಳಿ ಡಾ.ರಮೇಶ್‌ಕುಮಾರ್ ಅವರ ಅರ್ಜಿಯನ್ನು ವಿಲೇವಾರಿಗೊಳಿಸಿತು. ಈ ಹಿನ್ನೆಲೆಯಲ್ಲಿ ಪ್ರಭಾಕರನ್ ನೂತನ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. ನೂತನ ಅರಣ್ಯ ಸಂರಕ್ಷಣಾಧಿಕಾರಿಯನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ರವೀಂದ್ರ, ನವೀನ್, ಆರ್‌ಎಫ್‌ಒಗಳಾದ ಸತೀಶ್, ಮಲ್ಲೇಶ್, ದೀಪಾ ಹಾಗೂ ಸಿಬ್ಬಂದಿ ಸ್ವಾಗತಿಸಿದರು.