ಜಿಲ್ಲೆ

ರಸ್ತೆ ತೆರವಿಗೆ ಛಲವಾದಿ ನಾರಾಯಣಸ್ವಾಮಿ ಡಿಸಿಗೆ ಪತ್ರ

ಕಿರಣ್ ಮಾದರಹಳ್ಳಿ

ಗುಂಡ್ಲುಪೇಟೆ: ತಾಲೂಕಿನ ಹಿರೀಕಾಟಿ ಗ್ರಾಮಕ್ಕೆ ಸೆ.24ರಂದು ಭೇಟಿ ನೀಡಿದ್ದ ವಿಧಾನಪರಿಷತ್ ವಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಜಿಲ್ಲಾಧಿಕಾರಿಗೆ ಪತ್ರ ಬರೆದು ರೈತರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಫಸಲನ್ನು ನಾಶಗೊಳಿಸಿ ಕ್ರಷರ್‌ಗೆ ರಸ್ತೆ ನಿರ್ಮಾಣ ಮಾಡಿರುವುದನ್ನು ತೆರವುಗೊಳಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಕೋರಿದ್ದಾರೆ.

ಗ್ರಾಮದ ನೀಲಕಂಠ, ಕೃಷ್ಣ, ಮಹದೇವಪ್ರಸಾದ್ ಹಾಗೂ ಗ್ರಾಮದ ರೈತರ ಮನವಿ ಮೇರೆಗೆ ಖುದ್ದಾಗಿ ಸಂಬಂಧಪಟ್ಟ ಅಧಿಕಾರಿಗಳು, ಗ್ರಾಮಸ್ಥರು ಹಾಗೂ ಮಾಧ್ಯಮದವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅಕ್ರಮವಾಗಿ ರೈತರ ಜಮೀನಿನಲ್ಲಿ ರಸ್ತೆ ಮಾಡಿರುವುದು ಕಂಡು ಬಂದಿದೆ. ತೊಂಡವಾಡಿ, ದೊಡ್ಡಹುಂಡಿ ಗ್ರಾಮಸ್ಥರ ಸಮ್ಮುಖದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ರೈತರ ಜಮೀನಿನಲ್ಲಿ ನಿರ್ಮಿಸಿರುವ ರಸ್ತೆಯನ್ನು ತೆರವುಗೊಳಿಸುವುದಾಗಿ ಹೇಳಿಕೆ ನೀಡಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಘಟನಾ ಸ್ಥಳದಿಂದ ನೇರವಾಗಿ ದೂರವಾಣಿ ಮೂಲಕ ತಮಗೆ ತಿಳಿಸಲಾಗಿದೆ. ಹೀಗಾಗಿ ಪರಿಶೀಲಿಸಿ ರೈತರಿಗೆ ನ್ಯಾಯ ಒದಗಿಸುವ ಜತೆಗೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ತಿಳಿಸಿದ್ದಾರೆ.