ಜಿಲ್ಲೆ

ವನ್ಯಜೀವಿಗಳ ಹಾವಳಿ ತಡೆಗಟ್ಟುವಂತೆ ಆಗ್ರಹ

ಕಿರಣ್ ಮಾದರಹಳ್ಳಿ

ಗುಂಡ್ಲುಪೇಟೆ: ಕಾಡಂಚಿನ ಗ್ರಾಮಗಳಲ್ಲಿ ಹೆಚ್ಚಿರುವ ವನ್ಯಜೀವಿ ದಾಳಿ ತಡೆಗಟ್ಟುವಂತೆ ಒತ್ತಾಯಿಸಿದ ಕರ್ನಾಟಕ ರಾಜ್ಯ ಕಬ್ಬು ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಓಂಕಾರ್ ವಲಯದ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬುಧವಾರ ಓಂಕಾರ್ ವಲಯದ ಕಾಡಂಚಿನ ಬೆಟ್ಟದ ಮಾದಳ್ಳಿ, ಕೋಟೆಕೆರೆ, ಮಂಚಹಳ್ಳಿ, ಯಡವನಹಳ್ಳಿ, ಹೊಸಪುರ ಹಾಗೂ ಅಕ್ಕ ಪಕ್ಕದ ಗ್ರಾಮಗಳ ರೈತರು ಕಚೇರಿ ಎದುರು ಪ್ರತಿಭಟನೆ ನಡೆಸಿ ವನ್ಯಜೀವಿ ದಾಳಿ ನಿಯಂತ್ರಿಸದ ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿದರು. ರೈತರ ಜಮೀನುಗಳಿಗೆ ಪ್ರಾಣಿಗಳು ಬಂದು ಬೆಳೆ ಹಾಳು ಮಾಡಿವೆ. ಹಲವಾರು ಜಮೀನುಗಳಲ್ಲಿನ ಜೋಳ, ರಾಗಿ, ಕಡಲೆಕಾಯಿ, ಸೂರ್ಯಕಾಂತಿ, ಬಾಳೆ, ಟೊಮ್ಯಾಟೊ, ಮೆಣಸಿನಕಾಯಿ ಇತರ ಫಸಲುಗಳನ್ನು ತುಳಿದು ಹಾಳು ಮಾಡಿವೆ. ಸ್ಥಳಕ್ಕೆ ಶಾಸಕ ಗಣೇಶ್ ಪ್ರಸಾದ್, ಹುಲಿ ಯೋಜನೆಯ ನಿರ್ದೇಶಕ ಪ್ರಭಾಕರನ್ ಆಗಮಿಸಿ ಕಾಡಂಚಿನ ಗ್ರಾಮಗಳ ರೈತರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಲು ಕ್ರಮಕೈಗೊಳ್ಳಬೇಕು ಎಂದು ಪಟ್ಟುಹಿಡಿದರು.

ಹುಲಿ ಯೋಜನೆಯ ನಿರ್ದೇಶಕ ಪ್ರಭಾಕರನ್ ಅನಾರೋಗ್ಯ ನಿಮಿತ್ತ ರಜೆ ಹಾಕಿದ್ದರು. ಶಾಸಕರು ಕ್ಷೇತ್ರದಲ್ಲಿಯೇ ಇದ್ದರೂ ಸ್ಥಳಕ್ಕೆ ಆಗಮಿಸದ ಬಗ್ಗೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಓಂಕಾರ್ ವಲಯದ ಆರ್.ಎಫ್.ಒ ಸತೀಶ್ ಕುಮಾರ್ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಓಂಕಾರ್ ವಲಯದಲ್ಲಿ ಹಿಂದಿನಿಂದಲೂ ಆನೆಗಳು ಹೊರಬರುತ್ತಿದ್ದು, ಇದನ್ನು ತಡೆಗಟ್ಟಲು 5 ಕಿಲೋಮೀಟರ್ ಉದ್ದಕ್ಕೆ ರೈಲು ಕಂಬಿಗಳನ್ನು ಅಳವಡಿಸಿದೆ. ಆದರೂ, ಆನೆಗಳು ಬೇರೆ ಕಡೆಗಳಿಂದ ಹೊರಬರುತ್ತಿವೆ. ಪ್ರತಿ ದಿನವೂ ರಾತ್ರಿ ಅರಣ್ಯ ಸಿಬ್ಬಂದಿ ಗಸ್ತು ನಡೆಸಿ ರೈತರು ಕರೆ ಮಾಡಿದ ಕೂಡಲೇ ಅಲ್ಲಿಗೆ ತೆರಳಿ ಆನೆಗಳನ್ನು ಕಾಡಿಗಟ್ಟುತ್ತಿದ್ದಾರೆ. ಇನ್ನೂ ಹತ್ತು ಕಿಲೋ ಮೀಟರ್ ರೈಲ್ವೇ ಕಂಬಿ ಅಳವಡಿಸಿದರೆ ಸ್ವಲ್ಪಮಟ್ಟಿಗೆ ಹಾವಳಿ ನಿಯಂತ್ರಿಸಬಹುದು. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೆಳೆನಷ್ಟಕ್ಕೆ ಕೂಡಲೇ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮಣಿಕಂಠ, ಶ್ರೀನಿವಾಸ, ಮಾದೇವ ನಾಯಕ, ವಸಂತ್ ಕುಮಾರ್, ಗೋವಿಂದ ನಾಯಕ, ಪ್ರಭು, ವೆಂಕಟನಾಯ್ಕ ಸೇರಿದಂತೆ ಹಲವರು ಇದ್ದರು.