ಗುಂಡ್ಲುಪೇಟೆ: ತಾಲೂಕಿನ ಕಳ್ಳೀಪುರ ಗ್ರಾಮದಲ್ಲಿ ರೈತರ ಜಮೀನುಗಳಿಗೆ ಹೋಗುವ ದಾರಿಯನ್ನು ಬಿಡಿಸುವ ಬಗ್ಗೆ ಕ್ರಮಕೈಗೊಳ್ಳದ ತಾಲೂಕು ಆಡಳಿತದ ವಿರುದ್ಧ ರೈತ ಸಂಘದ ಕಾರ್ಯಕರ್ತರು ಆಹೋರಾತ್ರಿ ಪ್ರತಿಭಟನೆ ಕೈಗೊಂಡಿದ್ದಾರೆ.
ಗ್ರಾಮದ ಮಹೇಶ್ ಎಂಬುವರು ರೈತರು ತಮ್ಮ ಜಮೀನುಗಳಿಗೆ ಹೋಗುವ ದಾರಿಯನ್ನು ಅಕ್ರಮವಾಗಿ ಮುಚ್ಚಿದ್ದಾರೆ. ಇದರಿಂದ ಈ ರಸ್ತೆಯಲ್ಲಿ ಹೊಗುತ್ತಿದ್ದ ಸುಮಾರು ಹತ್ತಕ್ಕೂ ಹೆಚ್ಚಿನ ರೈತರ ಜಮೀನುಗಳಿಗೆ ದಾರಿಯಿಲ್ಲದಂತಾಗಿದೆ. ಈ ಬಗ್ಗೆ ರೈತರು ವಾರದ ಹಿಂದೆ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದಾರೆ. ಕೂಡಲೇ ದಾರಿ ಬಿಡಿಸಲು ಕ್ರಮ ಕೈಗೊಳ್ಳುವಂತೆ ಡಿಸಿಯವರು ತಹಸೀಲ್ದಾರ್‌ಗೆ ಸೂಚಿಸಿದ್ದರು. ಗುರುವಾರ ಸ್ಥಳಕ್ಕೆ ಬರುವುದಾಗಿ ತಿಳಿಸಿದ ತಹಸೀಲ್ದಾರ್ ಸಂಜೆವರೆಗೂ ಬಾರದಿರುವುದರಿಂದ ಅಸಮಾಧಾನಗೊಂಡ ರೈತರು ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಆಹೋರಾತ್ರಿ ಧರಣಿ ಕೈಗೊಂಡರು.