ಜಿಲ್ಲೆ

ಶ್ರದ್ಧಾ ಭಕ್ತಿಯ ಶ್ರೀ ರಾಘವೇಂದ್ರಸ್ವಾಮಿಗಳ ಆರಾಧನಾ ಮಹೋತ್ಸವ

ಕಿರಣ್ ಮಾದರಹಳ್ಳಿ

ಗುಂಡ್ಲುಪೇಟೆ: ಪಟ್ಟಣದ ಮಹಾಲಕ್ಷ್ಮೀ ಬಡಾವಣೆಯಲ್ಲಿರುವ ರಾಘವೇಂದ್ರಸ್ವಾಮಿಗಳ ಮೃತ್ತಿಕಾ ಬೃಂದಾವನ ಸನ್ನಿಧಾನದಲ್ಲಿ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ಮೂರು ದಿನಗಳಿಂದ ಬೆಂಗಳೂರಿನ ವೇಣುಗೋಪಾಲಾಚಾರ್ ನೇತೃತ್ವದಲ್ಲಿ ನಾನಾ ಕೈಂಕರ್ಯಗಳನ್ನು ನಡೆಸಲಾಯಿತು. ವಿದುಷಿ ಇಂದ್ರಾಣಿ ಅವರಿಂದ ದೇವರನಾಮ ಸ್ಮರಣೆ, ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದುಷಿ ರಮ್ಯಾ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಗುರುವಾರ ಬೆಳಗ್ಗೆ ಶ್ರೀರಾಮತಾರಕ ಹೋಮ ಹಾಗೂ ಶ್ರೀ ರಾಘವೇಂದ್ರ ಅಷ್ಟಾಕ್ಷರ ಹೋಮ, ಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೈಸೂರಿನ ಮಾತೃಶ್ರೀ ಭಜನಾ ಮಂಡಳಿಯಿಂದ ಭಜನೆಯೊಂದಿಗೆ ಅಲಂಕೃತ ಸಾರೋಟಿನಲ್ಲಿ ಶ್ರೀ ರಾಘವೇಂದ್ರರ ಭಾವಚಿತ್ರವನ್ನು ಮೆರವಣಿಗೆ ನಡೆಸಲಾಯಿತು. ಟ್ರಸ್ಟ್ ಅಧ್ಯಕ್ಷೆ ರಾಜೇಶ್ವರಿ, ಉಪಾಧ್ಯಕ್ಷ ಇಂದೂಶೇಖರ್, ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಕೆ.ಸುರೇಶ್ ಇದ್ದರು.