ಜಿಲ್ಲೆ

ಕೊಳೆಯುತ್ತಿದೆ ಸಣ್ಣ ಈರುಳ್ಳಿ ಬೆಳೆ

ಕಿರಣ್ ಮಾದರಹಳ್ಳಿ

ಗುಂಡ್ಲುಪೇಟೆ: ನಿರಂತರವಾಗಿ ಬೀಳುತ್ತಿರುವ ಮಳೆಯ ಪರಿಣಾಮ ಭೂಮಿಯಲ್ಲಿ ಕೊಳೆಯುತ್ತಿರುವ ಸಣ್ಣ ಈರುಳ್ಳಿಯಿಂದ ಹುಲುಸಾಗಿ ಬೆಳೆದಿರುವ ಅರಿಶಿಣ ಬೆಳೆ ಕಾಪಾಡಿಕೊಳ್ಳಲು ರೈತರು ಹರಸಾಹಸ ಮಾಡುತ್ತಿದ್ದಾರೆ.

ಕ್ವಿಂಟಾಲ್‌ಗೆ 5 ರಿಂದ 6 ಸಾವಿರ ರೂ.ಕೊಟ್ಟು ಖರೀದಿಸಿ ಬಿತ್ತನೆ ಮಾಡಿದ್ದ ಸಣ್ಣ ಈರುಳ್ಳಿ ನಿರಂತರ ಮಳೆಯಿಂದ ಕೊಳೆಯುತ್ತಿದ್ದು ಅರಿಶಿಣ ಬೆಳೆಗೂ ಹಾನಿಯುಂಟು ಮಾಡುತ್ತಿದೆ. ಅರಿಶಿಣ ಬೆಳೆಯನ್ನು ಉಳಿಸಿಕೊಳ್ಳಲು ಮುಂದಾಗಿರುವ ರೈತರು ಕಾರ್ಮಿಕರಿಗೆ ಸಾವಿರಾರು ರೂ. ಕೂಲಿ ಕೊಟ್ಟು ಕೀಳಿಸಿದ ಈರುಳ್ಳಿಯನ್ನು ರಸ್ತೆ ಬದಿಗಳಲ್ಲಿ ಸುರಿಯುತ್ತಿದ್ದಾರೆ. ಇದರಿಂದ ತಾಲೂಕಿನ ಗ್ರಾಮಾಂತರ ಪ್ರದೇಶಗಳ ರಸ್ತೆ ಬದಿಗಳಲ್ಲಿ ಲೋಡುಗಟ್ಟಲೆ ಈರುಳ್ಳಿ ರಾಶಿಯಾಗಿ ಬೀಳುತ್ತಿದೆ.

ತಾಲೂಕಿನ ಬಹುತೇಕ ರೈತರು ಅರಿಶಿಣದ ಜತೆ ಮಿಶ್ರ ಬೆಳೆಯಾಗಿ ಸಣ್ಣ ಈರುಳ್ಳಿಯನ್ನು ಬಿತ್ತನೆ ಮಾಡಿದ್ದಾರೆ. ಕಳೆದ ಬಾರಿ ಅರಿಶಿಣಕ್ಕೆ ಉತ್ತಮ ಬೆಲೆ ಸಿಕ್ಕಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ರೈತರು ಅರಿಶಿಣವನ್ನು ಬಿತ್ತನೆ ಮಾಡಿದ್ದಾರೆ. ನಿರಂತರವಾಗಿ ಬೀಳುತ್ತಿರುವ ಮಳೆಯ ಪರಿಣಾಮ ರೈತರು ಬೆಳೆದಿರುವ ಸಣ್ಣ ಈರುಳ್ಳಿಯ ಕಟಾವು ಸಾಧ್ಯವಾಗದಂತಾಗಿದೆ. ಅಲ್ಲದೆ ಸಣ್ಣ ಈರುಳ್ಳಿಯ ಬೆಲೆ ಕುಸಿದಿದ್ದರಿಂದ ಇದನ್ನು ಖರೀದಿಸುವವರೂ ಇಲ್ಲದಂತಾಗಿದ್ದರಿಂದ ಅವಧಿ ಮೀರಿದ ಈರುಳ್ಳಿ ಭೂಮಿಯಲ್ಲಿಯೇ ಕೊಳೆಯಲಾರಂಭಿಸಿದೆ. ಇದನ್ನು ಕೀಳದೆ ಭೂಮಿಯಲ್ಲಿಯೇ ಬಿಟ್ಟರೆ ಹುಲುಸಾಗಿ ಬೆಳೆದಿರುವ ಅರಿಶಿಣ ಬೆಳೆಯೂ ರೋಗ ಬಾಧೆಗೊಳಗಾಗುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಕಾರ್ಮಿಕರಿಗೆ ಕೂಲಿ ಕೊಟ್ಟು ಕೀಳಿಸಿ ರಸ್ತೆ ಬದಿಗಳಲ್ಲಿ ಸುರಿಯುತ್ತಿದ್ದಾರೆ.

1500 ಹೆಕ್ಟೇರ್‌ನಲ್ಲಿ ಬಿತ್ತನೆ
ತಾಲೂಕಿನ ಬಹುತೇಕ ರೈತರು 60 ದಿನಗಳ ಅಲ್ಪಾವಧಿ ಬೆಳೆಯಾದ ಸಣ್ಣ ಈರುಳ್ಳಿಯನ್ನು ಪ್ರತಿ ವರ್ಷ ಬೆಳೆಯುತ್ತಾ ಬಂದಿದ್ದಾರೆ. ಒಮ್ಮೊಮ್ಮೆ ಉತ್ತಮ ಬೆಲೆ ಸಿಕ್ಕಿ ಲಾಭ ಪಡೆದರೆ ಹಲವು ಬಾರಿ ಬೆಲೆಕುಸಿತದಿಂದ ಕೈಸುಟ್ಟುಕೊಳ್ಳುತ್ತಿದ್ದರೂ ಈ ಬಾರಿ 1500 ಹೆಕ್ಟೇರ್‌ಗೂ ಹೆಚ್ಚಿನ ಬಿತ್ತನೆ ಮಾಡಲಾಗಿದೆ. ತಾಲೂಕಿನ ಅತಿಹೆಚ್ಚು ರೈತರು ತಮ್ಮ ಜಮೀನುಗಳಲ್ಲಿ ಅರಿಶಿಣ ಬೆಳೆಯ ಜತೆಗೆ ಸಣ್ಣ ಈರುಳ್ಳಿಯನ್ನೂ ಮಿಶ್ರಬೆಳೆಯಾಗಿ ನಾಟಿ ಮಾಡಿದ್ದರಿಂದ ಈ ಬಾರಿ ಬಿತ್ತನೆ ಪ್ರಮಾಣ ಹೆಚ್ಚಾಗಿದೆ.
ಜುಲೈ ಆರಂಭದಲ್ಲಿ ಕ್ವಿಂಟಾಲ್‌ಗೆ 5 ರಿಂದ 6 ಸಾವಿರ ರೂ.ವರೆಗೆ ಇದ್ದ ಸಣ್ಣ ಈರುಳ್ಳಿಯ ಬೆಲೆ ಮಳೆ ಹೆಚ್ಚಾಗುತ್ತಿದ್ದಂತೆ ಪಾತಾಳಕ್ಕೆ ಕುಸಿದಿದೆ. ಸದ್ಯ ಮಾರುಕಟ್ಟೆಯಲ್ಲಿ ಇದನ್ನು 500 ರೂ.ಗೂ ಕೊಳ್ಳುವವರು ಇಲ್ಲದಂತಾಗಿದೆ. ಇದರ ಪರಿಣಾಮ ಗೋಪಾಲಪುರ, ಕುಣಗಹಳ್ಳಿ, ದೇವರಹಳ್ಳಿ ಮುಂತಾದ ಗ್ರಾಮಗಳ ರೈತರು ಲಕ್ಷಾಂತರ ರೂ.ವೆಚ್ಚದಲ್ಲಿ ಬೆಳೆದ ಬೆಳೆಗಳನ್ನು ರೊಟಾವೇಟರ್ ಬಳಸಿ ಉಳುಮೆ ಮಾಡುತ್ತಿದ್ದಾರೆ.
ಕಗ್ಗಳದಹುಂಡಿ ಗ್ರಾಮದ ರವಿ ಅವರು ಪ್ರತಿ ಎಕರೆಗೆ 50 ಸಾವಿರ ರೂ.ಖರ್ಚು ಮಾಡಿ ಬೆಳೆದಿದ್ದ ಈರುಳ್ಳಿಯನ್ನು 10 ಸಾವಿರ ಕೂಲಿ ನೀಡಿ ಕೀಳಿಸಿ ಟ್ರ್ಯಾಕ್ಟರ್‌ನಲ್ಲಿ ಕೊಂಡೊಯ್ದು ರಸ್ತೆ ಬದಿಗೆ ಸುರಿಯುತ್ತಿದ್ದಾರೆ.

ಕಳದೆ ವರ್ಷ ಭೀಕರ ಬರದಿಂದ ತತ್ತರಿಸಿದ್ದ ರೈತರಿಗೆ ಇನ್ನೂ ಸಮರ್ಪಕವಾಗಿ ಬೆಳೆನಷ್ಟ ಪರಿಹಾರ ನೀಡಿಲ್ಲ. ಅಲ್ಲದೆ ಪೂರ್ವ ಮುಂಗಾರಿನಲ್ಲಿ ಕೋಟ್ಯಂತರ ರೂ. ಮೊತ್ತದ ಬಾಳೆ ನೆಲಕಚ್ಚಿದ್ದರೂ ಕಂದಾಯ ಇಲಾಖೆ ಇನ್ನೂ ಅದನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿಲ್ಲ. ನೈಸರ್ಗಿಕ ವಿಕೋಪದಿಂದ ಸುರಿಯುತ್ತಿರುವ ಮಳೆಯಿಂದ ರೈತರು ಸಾಲಸೋಲ ಮಾಡಿ ಬೆಳೆದ ಲಕ್ಷಾಂತರ ರೂ.ಬೆಳೆ ನಾಶವಾಗಿದ್ದರೂ ಜನರ ಕಷ್ಟಕ್ಕೆ ನೆರವಾಗಬೇಕಾದ ಸರ್ಕಾರ ಖುರ್ಚಿ ಉಳಿಸಿಕೊಳ್ಳುವ ಹೋರಾಟದಲ್ಲಿ ತೊಡಗಿಸಿಕೊಂಡಿದೆ. ಕೃಷಿ, ತೋಟಗಾರಿಕೆ, ರೇಷ್ಮೆ ಮುಂತಾದ ಯಾವುದೇ ಇಲಾಖೆಗಳಿಗೂ ಅನುದಾನ ನೀಡದ ಪರಿಣಾಮ ರೈತರಿಗೆ ಯಾವುದೇ ಸವಲತ್ತುಗಳು ದೊರಕದಂತಾಗಿದೆ. ಇನ್ನಾದರೂ ಬೆಂಬಲ ಬೆಲೆ ನೀಡುವ ಮೂಲಕ ರೈತರಿಗೆ ನೆರವಾಗಬೇಕು.ಮಾಧು, ಹಂಗಳ ಗ್ರಾಮದ ರೈತ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ರೈತರು ನೀಡುವ ಅರ್ಜಿಯನ್ನು ಸ್ವೀಕರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಬರ ಪರಿಹಾರವನ್ನು ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ. ಪೂರ್ವ ಮುಂಗಾರಿನಲ್ಲಿ 1,116 ಜನರ 697 ಹೆಕ್ಟೇರ್‌ನಷ್ಟು ಬಾಳೆ ನಾಶವಾಗಿದ್ದು ಈ ಅರ್ಜಿಗಳನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಪರಿಹಾರದ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುವುದು.ಟಿ. ರಮೇಶ್‌ಬಾಬು, ತಹಸೀಲ್ದಾರ್