ಜಿಲ್ಲೆ

ರೈತರಿಗೆ ವರವಾದ ‘ಇ-ಟೆಂಡರ್’

ಗುಂಡ್ಲುಪೇಟೆ: ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ‘ಇ-ಟೆಂಡರ್’ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕುವಂತೆ ಮಾಡುವ ಜತೆಗೆ ತನಗೂ ಆದಾಯದ ಮೂಲಕ ಕಂಡುಕೊಂಡಿದೆ.

ಪಟ್ಟಣದಲ್ಲಿ 1998ರಲ್ಲಿ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಆರಂಭವಾಗಿದ್ದು, ಹೊರವಲಯದಲ್ಲಿ 10.27 ಎಕರೆ ವಿಸ್ತೀರ್ಣದಲ್ಲಿ ಮುಖ್ಯ ಮಾರುಕಟ್ಟೆ, ತೆರಕಣಾಂಬಿಯಲ್ಲಿ 9.25 ಎಕರೆಯಲ್ಲಿ ಉಪಮಾರುಕಟ್ಟೆ, 2 ಎಕರೆ ಪ್ರದೇಶದಲ್ಲಿ ಹಣ್ಣು ತರಕಾರಿ ಮಾರುಕಟ್ಟೆ ಇದೆ. ಪ್ರತಿ ಗುರುವಾರ ನಡೆಯುತ್ತಿರುವ ತೆರಕಣಾಂಬಿಯ ಸಂತೆಯೊಂದರಲ್ಲಿಯೇ ಕೋಟ್ಯಂತರ ರೂ. ವಹಿವಾಟು ನಡೆಯುತ್ತಿದೆ. ರೈತರು ತಾವು ಬೆಳೆದ ಉತ್ಪನ್ನಗಳನ್ನು ಇಲ್ಲಿಗೆ ತಂದು ಮಾರಾಟ ಮಾಡುತ್ತಿದ್ದಾರೆ. ನೆರೆಯ ತಮಿಳುನಾಡು, ಕೇರಳ ಹಾಗೂ ಆಂಧ್ರ ಪ್ರದೇಶಗಳಿಂದಲೂ ವರ್ತಕರು ಇಲ್ಲಿಗೆ ಆಗಮಿಸುವುದರಿಂದ ಉತ್ಪನ್ನಗಳಿಗೆ ಉತ್ತಮ ಬೆಲೆಯೂ ಸಿಕ್ಕುತ್ತಿದೆ. ದಿನನಿತ್ಯ ಜೀವನಕ್ಕೆ ಅಗತ್ಯವಾದ ಎಲ್ಲ ವಸ್ತುಗಳೂ ಸಂತೆಯಲ್ಲಿ ಕಡಿಮೆ ಬೆಲೆಗೆ ದೊರಕುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಸಹ ಇಲ್ಲಿಗೆ ಬಂದು ಖರೀದಿಸುತ್ತಿದ್ದಾರೆ.

ಅನ್ಯಾಯ ತಡೆಗಟ್ಟಲು ಇ-ಟೆಂಡರ್:
ಆದರೆ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿ, ಬೆಲೆ ನಿಗದಿಯಲ್ಲಿ ಅನ್ಯಾಯ, ತೂಕ ಹಾಗೂ ಅಳತೆಯಲ್ಲಿ ಮೋಸ ಮುಂತಾದ ಅಕ್ರಮಗಳಿಂದ ಬೆಳೆಗಾರರು ತುಂಬ ನಷ್ಟ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಜ. 15ರಿಂದ ಎಪಿಎಂಸಿಯು ‘ಇ-ಟೆಂಡರ್’ ಪದ್ಧತಿ ಜಾರಿಗೊಳಿಸುವ ಮೂಲಕ ಖರೀದಿ ವ್ಯವಸ್ಥೆಯನ್ನು ಸಕ್ರಮಗೊಳಿಸಿತು. ಇದರಿಂದ ರೈತರಿಗೆ ಆಗುತ್ತಿದ್ದ ಅನ್ಯಾಯ ತಪ್ಪಿದ್ದು, ಎಲ್ಲ ಉತ್ಪನ್ನಗಳಿಗೂ ಹೆಚ್ಚಿನ ಬೆಲೆ ಸಿಗುವಂತಾಗಿದೆ.

ಗುರುವಾರ ಮಾತ್ರ ನಡೆಯುತ್ತಿದ್ದ ವ್ಯಾಪಾರವನ್ನು ಸೋಮವಾರವೂ ನಡೆಸುವ ಮೂಲಕ ವಹಿವಾಟು ಹೆಚ್ಚಿಸಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿದ್ದರಿಂದ ಹುರುಳಿ, ಹುಣಸೆ, ಎಳ್ಳು ಮುಂತಾದ ಉತ್ಪನ್ನಗಳಿಗೆ ಮೈಸೂರು ಮಾರುಕಟ್ಟೆಗಿಂತಲೂ ಹೆಚ್ಚಿನ ದರ ದೊರಕುತ್ತಿದೆ. ಮೈಸೂರಿಗೆ ಕೊಂಡೊಯ್ಯಲು ಆಗುತ್ತಿದ್ದ ಸಾಗಣೆ ವೆಚ್ಚ, ಶ್ರಮ, ಸಮಯ, ಕಾರ್ಮಿಕರ ಕೂಲಿಯೂ ಉಳಿತಾಯವಾಗುತ್ತಿದ್ದು, ಬಹುಕೇತ ರೈತರು ಇದನ್ನು ಅನುಸರಿಸುತ್ತಿದ್ದಾರೆ.

ಹೆಚ್ಚಿದ ಆದಾಯ:ರೈತರ ಎಲ್ಲ ಉತ್ಪನ್ನಗಳಿಗೆ ಇ-ಟೆಂಡರ್ ಮೂಲಕ ದರ ನಮೂದಿಸಿ ಆನ್‌ಲೈನ್ ಟ್ರೇಡಿಂಗ್ ಚಟುವಟಿಕೆಗಳನ್ನು ಆರಂಭಿಸಿದ ನಂತರ ಹೆಚ್ಚಿನ ಬೆಲೆ ನಿಗದಿಯಾಗುತ್ತಿದೆ. ಸಮಿತಿಗೆ ಪ್ರತಿ ತಿಂಗಳೂ ಒಂದು ಲಕ್ಷ ರೂ.ಗಳಷ್ಟು ಆದಾಯ ಹೆಚ್ಚಳವಾಗಿದೆ. ಗುರುವಾರಕ್ಕೆ ಸೀಮಿತವಾಗಿದ್ದ ಚಟುವಟಿಕೆಗಳನ್ನು ಸೋಮವಾರವೂ ಆರಂಭಿಸಿದ್ದರಿಂದ ಮಾರುಕಟ್ಟೆಯಲ್ಲಿದ್ದ ಒತ್ತಡ ನಿವಾರಿಸಿ ಮಧ್ಯವರ್ತಿಗಳಿಂದ ರೈತರು ಹಾಗೂ ಖರೀದಿದಾರರಿಗೆ ಆಗುತ್ತಿದ್ದ ಸಮಸ್ಯೆಗಳನ್ನು ತಪ್ಪಿಸಲಾಯಿತು. ಆಸಕ್ತ ರೈತರ ವಾಟ್ಸ್‌ಆ್ಯಪ್‌ಗೆ ಪ್ರತಿ ವಾರದ ಬೆಲೆಗಳ ವಿವರ ಹಾಕಲಾಗುತ್ತಿದ್ದು, ಯಾವ ಪದಾರ್ಥಕ್ಕೆ ಎಷ್ಟು ಬೆಲೆಯಿದೆ ಎಂಬುದನ್ನು ತಿಳಿಸಲಾಗುತ್ತಿದೆ. ಯಾವಾಗಲೂ ಕ್ವಿಂಟಾಲ್‌ಗೆ 4 ಸಾವಿರ ರೂ. ದಾಟದ ಹುರುಳಿ ಈಗ 6.5 ಸಾವಿರ ರೂ. ಬೆಲೆಗೆ ಮಾರಾಟವಾಗುವ ಮೂಲಕ ರೈತರಿಗೆ ಹೆಚ್ಚಿನ ಆದಾಯ ದೊರಕುವಂತಾಗಿದೆ.

ಟೆಂಡರ್ ಸಮಯ ನಿಗದಿಪಡಿಸಲು ಒತ್ತಾಯ
ಸಮಿತಿಯು ಟೆಂಡರ್ ಸಮಯವನ್ನು ನಿಗದಿಪಡಿಸದ ಪರಿಣಾಮ ಬೆಳ್ಳಂಬೆಳಗ್ಗೆ ಸಂತೆಗೆ ಬಂದವರು ಮಧ್ಯಾಹ್ನದವರೆಗೂ ಕಾಯುವಂತಾಗಿದೆ. ಕಡಿಮೆ ಉತ್ಪನ್ನಗಳನ್ನು ತರುವವರು ಅವುಗಳನ್ನು ಮಾರಿದ ಹಣದಲ್ಲಿ ತಮ್ಮ ದಿನಬಳಕೆಗೆ ಅಗತ್ಯವಾದ ವಸ್ತುಗಳನ್ನು ಖರೀದಿಸಬೇಕಾಗಿದೆ. ಆದರೆ ಟೆಂಡರ್ ಪ್ರಕ್ರಿಯೆ ವಿಳಂಬವಾಗುವುದರಿಂದ ಅಡ್ಡಾದಿಡ್ಡಿ ಬೆಲೆಗೆ ಮಾರಾಟ ಮಾಡಿ ನಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ಟೆಂಡರ್ ಸಮಯ ನಿಗದಿಪಡಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಸಂಯಮದಿಂದ ಲಾಭ
ಏತನ್ಮಧ್ಯೆ, ಕೆಲವು ಮಧ್ಯವರ್ತಿಗಳು ಹಾಗೂ ಹಿಂದೆ ಹೆಚ್ಚು ಲಾಭ ಗಳಿಸುತ್ತಿದ್ದ ವರ್ತಕರು ಈ ಪದ್ಧತಿಯನ್ನು ನಿಲ್ಲಿಸಲು ತೆರೆಮರೆಯಲ್ಲಿ ಪ್ರಯತ್ನ ನಡೆಸಿದ್ದಾರೆ. ಅಲ್ಲದೆ, ಕಟಾವಿನ ಸಂದರ್ಭದಲ್ಲಿ ಹೆಚ್ಚಿನ ರೈತರು ಹಾಗೂ ಉತ್ಪನ್ನಗಳು ಬರುವುದರಿಂದ ಬೆಲೆ ನಿಗದಿಪಡಿಸುವ ಪ್ರಕ್ರಿಯೆಗೆ ಸಾಕಷ್ಟು ಕಾಲಾವಕಾಶ ಬೇಕು. ಅರ್ಧ ದಿನ ಕಾದರೆ ಹೆಚ್ಚಿನ ಬೆಲೆ ದೊರಕಲಿದ್ದು, ರೈತರು ಸಂಯಮದಿಂದ ನಡೆದುಕೊಳ್ಳಬೇಕು ಎಂದು ರೈತ ಮುಖಂಡ ಟಿ.ಎಸ್.ಶಾಂತಮಲ್ಲಪ್ಪ ಸಲಹೆ ನೀಡಿದ್ದಾರೆ.

ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ಮಾರುಕಟ್ಟೆ ಸಮಿತಿಯ ಆದಾಯ ಕಡಿಮೆಯಾಗಿ ಹೊರಗುತ್ತಿಗೆ ನೌಕರರನ್ನು ತೆಗೆದು ಹಾಕಲಾಗಿದೆ. ಆದ್ದರಿಂದ ಇ -ಟೆಂಡರ್ ಪದ್ಧತಿಯಲ್ಲಿ ವ್ಯಾಪಾರಿಗಳು ನಿಗದಿಪಡಿಸಿದ ದರವನ್ನು ದಾಖಲಿಸಲು ಸಿಬ್ಬಂದಿ ಹಾಗೂ ಕಂಪ್ಯೂಟರ್‌ಗಳ ಕೊರತೆ ಎದುರಾಗಿದೆ. ಹೆಚ್ಚಿನ ಕಂಪ್ಯೂಟರ್ ಒದಗಿಸುವಂತೆ ಜಿಲ್ಲಾ ಸಮಿತಿಯನ್ನು ಕೋರಲಾಗಿದೆ.ರವಿ, ಕಮರಹಳ್ಳಿ, ಎಪಿಎಂಸಿ ಅಧ್ಯಕ್ಷ ಇ-ಟೆಂಡರ್ ಆರಂಭಿಸಿದ್ದರಿಂದ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಹಾಗೂ ವ್ಯಾಪಾರಿಗಳಿಗೆ ಗುಣಮಟ್ಟದ ಉತ್ಪನ್ನಗಳು ದೊರಕುವಂತಾಗಿದೆ. ಸಮಿತಿಗೂ ಮಾಸಿಕ ಒಂದು ಲಕ್ಷ ರೂ. ಆದಾಯ ಬರುವಂತಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಕಟಾವು ಆರಂಭವಾದರೆ ರೈತರ ಉತ್ಪನ್ನಗಳು ದೊಡ್ಡ ಪ್ರಮಾಣದಲ್ಲಿ ಬರುತ್ತವೆ. ಇವುಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ವಾರ ನಡೆಯುವ ಸಮಿತಿ ಸಭೆಯಲ್ಲಿ ಟೆಂಡರ್ ನಡೆಸುವ ಸಮಯ ಪ್ರಕಟಿಸಲಾಗುವುದು.ಶ್ರೀಧರ್, ಕಾರ್ಯದರ್ಶಿ, ಗುಂಡ್ಲುಪೇಟೆ ಎಪಿಎಂಸಿ