ಗುಂಡ್ಲುಪೇಟೆ: ಸರ್ಕಾರಿ ಭೂಮಿಯಲ್ಲಿ ಒಕ್ಕಲುತನ ಮಾಡುತ್ತಿರುವ ರೈತರ ಅನುಕೂಲಕ್ಕಾಗಿ ಹಕ್ಕುಪತ್ರ ನೀಡಲಾಗುತ್ತಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಸಲಹೆ ನೀಡಿದರು.
ಪಟ್ಟಣದ ಗುರುಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 150 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿ ಅವರು ಮಾತನಾಡಿದರು.
ಮೂರು ದಶಕಗಳಿಂದ ಉಳುಮೆ ಮಾಡುತ್ತಿದ್ದರೂ ರೈತರಿಗೆ ಭೂಮಿಯ ಒಡೆತನ ದೊರಕದೆ ಸಂಕಷ್ಟಕ್ಕೀಡಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಬಗರ್‌ಹುಕುಂ ಸಮಿತಿಯು ಅರ್ಹ ಅರ್ಜಿಗಳನ್ನು ಪರಿಗಣಿಸಿ ಸಕ್ರಮವಾಗಿರುವ 150 ಫಲಾನುಭವಿಗಳಿಗೆ ಮೊದಲ ಹಂತದಲ್ಲಿ ಹಕ್ಕುಪತ್ರ ವಿತರಿಸಲಾಗುತ್ತಿದೆ. ಇನ್ನಾದರೂ ರೈತರು ಭೂಮಿಯನ್ನು ಮಾರಾಟ ಮಾಡಿಕೊಳ್ಳದೆ ಸ್ವಾವಲಂಬಿಗಳಾಗಿ ಬದುಕು ನಡೆಸುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ರವಿಶಂಕರ್, ಬಗರ್‌ಹುಕುಂ ಸಮಿತಿಯ ಉಪಾಧ್ಯಕ್ಷ ನಿಟ್ರೆ ನಾಗರಾಜಪ್ಪ, ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಹಾಪ್‌ಕಾಮ್ಸ್ ಜಿಲ್ಲಾಧ್ಯಕ್ಷ ಕೆ.ಆರ್.ಲೋಕೇಶ್, ಪಿಕಾರ್ಡ್ ಬ್ಯಾಂಖ್ ಅಧ್ಯಕ್ಷ ಹೊರೆಯಾಲ ಮಹೇಶ್, ಎಪಿಎಂಸಿ ಅಧ್ಯಕ್ಷ ರವಿ ಸೇರಿದಂತೆ ಹಲವರು ಇದ್ದರು.