ಗುಂಡ್ಲುಪೇಟೆ: ಗುಂಡ್ಲು ನದಿ ಉಳಿಸಿ ಅಭಿಯಾನದ ಅಂಗವಾಗಿ ಗುಂಡ್ಲು ಪರಿಸರ ಬಳಗ ಶ್ರಮದಾನ ನಡೆಸಿದ ಪರಿಣಾಮ ಪಟ್ಟಣ ಹೊರವಲಯದ ಚಿಕ್ಕಕೆರೆಯ ಅಂಗಳದಲ್ಲಿ ನೀರು ತುಂಬಿ ಪಕ್ಷಿಗಳ ಕಲರವ ಕೇಳಿಬರುತ್ತಿದೆ.
ಈ ಬಾರಿ ಕೆರೆಗಳಿಗೆ ನದಿ ನೀರು ಹರಿಸಿದ್ದು ಹಾಗೂ ಹೆಚ್ಚಿನ ಮಳೆ ಬಿದ್ದ ಪರಿಣಾಮ ಮೂರು ದಶಕಗಳ ಹಿಂದೆ ಬತ್ತಿ ಹೋಗಿದ್ದ ಗುಂಡ್ಲು ಮಾರ್ಗದಲ್ಲಿ ನೀರು ಹರಿಯುತ್ತಿದೆ. ವಿಜಯಪುರ ಅಮಾನಿ ಕೆರೆಯಿಂದ ಚಿಕ್ಕಕೆರೆಗೆ ನೀರು ಹರಿಯುವ ಜಲಮಾರ್ಗ ಹಾಗೂ ಕಾಲುವೆಗಳು ಮುಚ್ಚಿಹೋಗಿದ್ದರಿಂದ ಗುಂಡ್ಲು ಪರಿಸರ ಬಳಗದ ಸಮಾನ ಮನಸ್ಕ ಯುವಕರು ಕಳೆದ ಮೂರು ಭಾನುವಾರಗಳು ಶ್ರಮದಾನ ಮಾಡಿ ಮುಚ್ಚಿಕೊಂಡಿದ್ದ ಸುಮಾರು 150 ಮೀಟರ್ ಉದ್ದದ ಕಾಲುವೆಯ ಹೂಳೆತ್ತಿದ್ದರು. ಏರಿಯ ಮೇಲೆ ಹಾಗೂ ಕಲ್ಲಿನ ಸೋಪಾನಗಳನ್ನು ಆವರಿಸಿದ್ದ ಗಿಡಗಂಟಿಗಳನ್ನು ತೆರವು ಮಾಡಿದ್ದಾರೆ, ಏರಿಯ ಉದ್ದಕ್ಕೂ ನಡೆಯಲು ದಾರಿ ನಿರ್ಮಿಸುತ್ತಿದ್ದಾರೆ. ಇದರಿಂದ ಕೆರೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು ನಡುಗಡ್ಡೆಯಲ್ಲಿ ಬೆಳೆದಿರುವ ಗಿಡಗಂಟಿಗಳ ಮೇಲೆ ಪಕ್ಷಿಗಳು ಕುಳಿತುಕೊಳ್ಳುವುದರಿಂದ ಚಿಲಿಚಿಲಿ ಕೇಳಿಬರುತ್ತಿದೆ.
ಬಳಗವು ಪ್ರತಿ ಭಾನುವಾರ ಶ್ರಮದಾನ ಆಯೋಜಿಸುವ ಜತೆಗೆ ಮಕ್ಕಳಿಗೆ ಪಕ್ಷಿಗಳನ್ನು ಗುರುತಿಸುವ ವಿಧಾನಗಳನ್ನು ಪರಿಚಯಿಸಿದೆ. ಈಗಾಗಲೇ ಹಿಮಾಲಯದಿಂದ ವಲಸೆ ಬಂದಿರುವ ನವರಂಗ(ಇಂಡಿಯನ್ ಪಿಂಟಾ), ಜಾನುವಾರು ಬಿಳಿ ಕೊಕ್ಕರೆ, ಬಕ, ಬುಳುಮುಳುಕ, ನೀರು ಕಾಗೆ, ಗೋಜಲಕ್ಕಿ, ಬ್ರಾಹ್ಮಿನ್ ಆಸ್ಟ್ರೇಲಿಯನ್ ಹುಯಿಲಕ್ಕಿ, ಚಂದ್ರ ಮುಕುಟ, ಹದ್ದುಗಳು, ಕಾಡು ಹಾಲಕ್ಕಿ, ರಾತ್ರಿ ಬಕ, ಕಟ್ಟೆದೇವನಹಕ್ಕಿ, ಟಿಟ್ಟಿಭ ಸೇರಿದಂತೆ ಈಗಾಗಲೇ ಎಪ್ಪತ್ತಕ್ಕೂ ಹೆಚ್ಚಿನ ಪ್ರಭೇದಗಳ ಪಕ್ಷಿಗಳನ್ನು ಗುರುತಿಸಲಾಗಿದೆ. ಜನವರಿ ವೇಳೆಗೆ ಇನ್ನೂ ಹತ್ತಾರು ವಲಸೆ ಪಕ್ಷಿಗಳ ಆಗಮನದ ನಿರೀಕ್ಷೆ ಇದೆ.
ಅಭಿವೃದ್ಧಿಗೆ ಶ್ರಮದಾನ: ಪಟ್ಟಣ ಹೊರವಲಯದಲ್ಲಿರುವ ಚಿಕ್ಕಕೆರೆ ಒಂದು ಕಾಲದಲ್ಲಿ ಪಟ್ಟಣದ ಕುಡಿಯುವ ನೀರಿನ ಮೂಲವಾಗಿತ್ತು. ಮೂರು ದಶಕಗಳ ಹಿಂದೆ ಗುಂಡ್ಲು ನದಿ ಬತ್ತಿಹೋದ ಪರಿಣಾಮ ಕೆರೆಗೆ ನೀರು ಬರುವುದು ನಿಂತುಹೋಗಿತ್ತು. ರಸ್ತೆ ನಿರ್ಮಾಣ ಮುಂತಾದ ಕಾಮಗಾರಿಗಳಿಗೆ ಬರಿದಾದ ಕೆರೆಯಂಗಳದ ಒಡಲನ್ನು ಬಗೆದು ಮಣ್ಣು ತೆಗೆದಿದ್ದರಿಂದ ಭಾರಿ ಆಳದ ಹಳ್ಳ ಗುಂಡಿಗಳು ಉಂಟಾಗಿತ್ತು. ಏರಿ ಹಾಗೂ ಅಂಗಳದಲ್ಲಿ ಮುಳ್ಳಿನ ಗಿಡಗಳು ಬೆಳೆದು ಇಡೀ ಕೆರೆ ಮುಚ್ಚಿಹೋಗಿತ್ತು. ಸದ್ಯ ನೀರು ಹರಿಯುತ್ತಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗಿ ವರ್ಷಪೂರ್ತಿ ನೀರು ನಿಲ್ಲಲು ಸಹಾಯಕವಾಗಿದೆ.
ಗುಂಡ್ಲು ನದಿ ಪುನಶ್ಚೇತನದ ಅಂಗವಾಗಿ ಕೆರೆಯನ್ನು ಮೈಸೂರಿನ ಕುಕ್ಕರಹಳ್ಳಿ ಕೆರೆ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಇಲ್ಲಿಗೆ ನೀರು ತುಂಬುವುದರಿಂದ ಕೊಳವೆಬಾವಿಗಳಲ್ಲಿ ಸಮರ್ಪಕ ನೀರು ಲಭ್ಯವಾಗಲಿದೆ. ಕಬಿನಿಯಿಂದ ಬರುವ ನೀರಿನ ಅವಲಂಬನೆ ಕಡಿಮೆಯಾಗಲಿದೆ. ಪಕ್ಷಿಧಾಮ ಆಗುವ ಜತೆಗೆ ಪಟ್ಟಣದ ನಾಗರಿಕರ ವಾಕಿಂಗ್ ಸ್ಪಾಟ್ ಆಗಲಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಪ್ರತಿ ಭಾನುವಾರ ಶ್ರಮದಾನ ಕಾರ್ಯಕ್ರಮಕ್ಕೆ ಕೈಜೋಡಿಸಬೇಕು ಎಂದು ಗುಂಡ್ಲು ಪರಿಸರ ಬಳಗದ ನಾಗಾರ್ಜುನ ಕುಮಾರ್ ವಿನಂತಿಸಿದ್ದಾರೆ.
ಕೆರೆ ಮಧ್ಯದಲ್ಲಿರುವ ನಡುಗಡ್ಡೆಯಲ್ಲಿ ಬೆಳೆದಿರುವ ಗಿಡಗಳ ಮೇಲೆ ಪಕ್ಷಿಗಳು ಹೆಚ್ಚಾಗಿ ನೆಲೆಸುತ್ತಿವೆ. ಏರಿಯ ಮೇಲೆ ಬೆಳೆದಿರುವ ಮುಳ್ಳಿನ ಗಿಡಗಳನ್ನು ತೆರವು ಮಾಡಿದ ನಂತರ ಹಣ್ಣು ಕೊಡುವ ಸಸಿಗಳನ್ನು ನೆಟ್ಟು ಬೆಳೆಸಿದರೆ ಪಕ್ಷಿಗಳಿಗೆ ಆಹಾರವಾಗುವ ಜತೆಗೆ ಉತ್ತಮ ಪರಿಸರ ನಿರ್ಮಾಣವಾಗುತ್ತದೆ.
ಆರ್.ಕೆ.ಮಧು ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ವನ್ಯಜೀವಿ ಛಾಯಾಗ್ರಾಹಕ