ಗುಂಡ್ಲುಪೇಟೆ ಪುರಸಭೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ಜಿ.ಎಸ್.ಮಧುಸೂದನ್ ಬಜೆಟ್ ಮಂಡಿಸಿದರು. ಎಚ್.ಎಂ.ಗಣೇಶ್ ಪ್ರಸಾದ್, ಅಣ್ಣಯ್ಯಸ್ವಾಮಿ, ವಸಂತಕುಮಾರಿ ಇದ್ದರು. 
ಜಿಲ್ಲೆ

ಗುಂಡ್ಲುಪೇಟೆ ಪುರಸಭೆ 79.86 ಲಕ್ಷ ರೂ. ಉಳಿತಾಯ ಬಜೆಟ್

ಗುಂಡ್ಲುಪೇಟೆ: ಪುರಸಭೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ 2025-26ನೇ ಸಾಲಿಗೆ 79.86 ಲಕ್ಷ ರೂ. ಉಳಿತಾಯ ಬಜೆಟ್ ಅನ್ನು ಅಧ್ಯಕ್ಷ ಜಿ.ಎಸ್.ಮಧುಸೂದನ್ ಮಂಡಿಸಿದರು.

ಪುರಸಭೆ ಸಭಾಂಗಣದಲ್ಲಿ ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಸಮ್ಮುಖದಲ್ಲಿ ಅಧ್ಯಕ್ಷ ಜಿ.ಎಸ್.ಮಧುಸೂದನ್ ಬಜೆಟ್ ಮಂಡಿಸಿ ಮಾತನಾಡಿ, ಆರಂಭಿಕ ಶಿಲ್ಕು 5,96,10,000 ರೂ., ಪುರಸಭೆಯ ವಿವಿಧ ಮೂಲಗಳಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನುದಾನಗಳು 26,58,86,000 ರೂ.ಸೇರಿದಂತೆ ಒಟ್ಟು 32,54,96,000 ರೂ. ನಿರೀಕ್ಷಿತ ಆದಾಯದಲ್ಲಿ 31,75,10,000 ರೂ. ವೆಚ್ಚವಾಗಲಿದ್ದು, 79.86 ಲಕ್ಷ ರೂ.ಉಳಿತಾಯ ಬಜೆಟ್ ಆಗಿದೆ ಎಂದು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ ಮಾತನಾಡಿ, ಪಟ್ಟಣದ ಸಮಗ್ರ ಅಭಿವೃದ್ಧಿ ಹಾಗೂ ಮೂಲ ಸೌಕರ್ಯವನ್ನು ನೀಡುವ ದೃಷ್ಟಿಯಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ತೆರಿಗೆ ಸಂಗ್ರಹದಲ್ಲಿ ಗುಂಡ್ಲುಪೇಟೆ ಪುರಸಭೆ ಉತ್ತಮ ಸ್ಥಾನವನ್ನು ಪಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪುರಸಭಾ ಅಧ್ಯಕ್ಷ, ವಿರೋಧ ಪಕ್ಷದ ನಾಯಕ ಪಿ.ಗಿರೀಶ್ ಮಾತನಾಡಿ, ಪಟ್ಟಣ ದಿನೇ ದಿನೆ ಬೆಳೆಯುತ್ತಿದ್ದು ಶಾಸಕರು ಸರ್ಕಾರದಿಂದ ಇನ್ನೂ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ಪಟ್ಟಣದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು ಅವರೇ ಬೀದಿ ದೀಪ ಹಾಗೂ ಚರಂಡಿ ನಿರ್ವಹಣೆ ಮಾಡಬೇಕಾಗಿದ್ದರೂ ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು.

ಜಲಜೀವನ್ ಮಿಷನ್ ಯೋಜನೆಯಲ್ಲಿ ಮನೆಗಳಿಗೆ ಕುಡಿಯುವ ನೀರು ಸಂಪರ್ಕ ಕಲ್ಪಿಸಲು ಕಳೆದ ವರ್ಷ ಹೊಸದಾಗಿ ನಿರ್ಮಿಸಿದ್ದ ಎಲ್ಲ ರಸ್ತೆಗಳನ್ನು ಅಗೆಯಲಾಗಿದೆ. ಆದ್ದರಿಂದ 10 ಕೋಟಿ ರೂ. ವೆಚ್ಚದಲ್ಲಿ ಕೂಡಲೇ ಮುಚ್ಚಿಸಲು ಕ್ರಮಕೈಗೊಳ್ಳಬೇಕು. ಸಾರ್ವಜನಿಕರ ಹಿತಾಸಕ್ತಿಯಿಂದ ಯಾವುದಾದರೂ ಉದ್ಯಾನದಲ್ಲಿ ಓಪನ್ ಜಿಮ್ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಸಕಾಲದಲ್ಲಿ ಬಿ ಖಾತೆ ಮಾಡಿಸಿಕೊಳ್ಳಿ

ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಸರ್ಕಾರ ಎ ಮತ್ತು ಬಿ ಖಾತೆಗಳನ್ನು ಮಾಡಲು ಮುಂದಾಗಿದ್ದು ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಹೇಳಿದರು.

ಪುರಸಭೆ ಬಜೆಟ್ ಮಂಡನೆ ಸಭೆಯಲ್ಲಿ ಮಾತನಾಡಿ, ತನ್ನ ವ್ಯಾಪ್ತಿಯ ಆಸ್ತಿಗಳ ಬಿ ಖಾತೆಗಳನ್ನು ಮಾಡಲು ಪುರಸಭೆ ಪ್ರತ್ಯೇಕ ಕೌಂಟರ್ ತೆರೆದಿದೆ. ಪುರಸಭೆ ವ್ಯಾಪ್ತಿಯಲ್ಲಿ ಬಾಕಿಯುಳಿದಿರುವ 957ಬಿ ಖಾತೆಗಳನ್ನು ನಿಗದಿತ ಸಮಯದಲ್ಲಿ ಶುಲ್ಕ ಪಾವತಿಸಿದ ಅರ್ಜಿದಾರರಿಗೆ ಶೀಘ್ರವೇ ಮಾಡಿಕೊಡಲು ಮುಂದಾಗಿದೆ. ಇವುಗಳನ್ನು ಮಾಡಿಕೊಡುವುದರಿಂದ ನಿವೇಶನ ಮಾಲೀಕರಿಗೆ ಮನೆ ಕಟ್ಟಿಕೊಳ್ಳಲು ಬ್ಯಾಂಕ್‌ಗಳಿಂದ ಸಾಲಸೌಲಭ್ಯಗಳು ದೊರೆಯುತ್ತವೆ. ಅಲ್ಲದೆ ಪುರಸಭೆಗೂ ಗಣನೀಯ ಪ್ರಮಾಣದಲ್ಲಿ ಆದಾಯ ಬರುತ್ತದೆ. ಇದಕ್ಕೆ 3 ತಿಂಗಳ ಕಾಲಾವಕಾಶವಿದ್ದು ಈಗಾಗಲೇ ಹಲವರು ಅರ್ಜಿ ಸಲ್ಲಿಸಿದ್ದಾರೆ. ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಪಟ್ಟಣದ ರಸ್ತೆ ಬದಿಗಳಲ್ಲಿ ನಿಂತು ತಳ್ಳುಗಾಡಿಗಳ ತಿಂಡಿ ತಿನಿಸು ಮಾರಾಟ ಮಾಡುವವರಿಗೆ ವಾಹನಗಳ ಪಾರ್ಕಿಂಗ್ ಸೇರಿದಂತೆ ಎಲ್ಲ ಸವಲತ್ತುಗಳು ಇರುವ ಪ್ರದೇಶವನ್ನು ಗುರುತಿಸಿ ಪ್ರತ್ಯೇಕ ಸ್ಥಳ ಗುರುತಿಸಿ ಸ್ಥಳಾಂತರಿಸಲಾಗುವುದು. ಸರ್ಕಾರ ಹೋಟೆಲ್‌ಗಳ ಆಹಾರ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ್ದು ಸಾರ್ವಜನಿಕರು ಸಹಕಾರ ನೀಡಿದರೆ ತಾಲೂಕನ್ನು ಪ್ಲಾಸ್ಟಿಕ್ ಮುಕ್ತ ಮಾಡಲಾಗುವುದು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ತಿಳಿಸಿದರು.

ಬೆಳೆಯುತ್ತಿರುವ ಪಟ್ಟಣದ ಪುರಸಭೆ ಕಚೇರಿಗೆ ನೂತನ ಕಟ್ಟಡ ನಿರ್ಮಾಣ ಅಗತ್ಯವಿದೆ. ಇದಕ್ಕಾಗಿ ಸರ್ಕಾರದಿಂದ 7.5 ಕೋಟಿ ರೂ.ಅನುದಾನ ಕೋರಲಾಗಿದೆ. ಪಟ್ಟಣದಲ್ಲಿ ಶುದ್ಧ ಕುಡಿಯುವ ಘಟಕಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆ, ವ್ಯಕ್ತಿಗೆ ನೀಡುವುದರಿಲ್ಲ. ಬದಲಾಗಿ ಘಟಕ ಆರಂಭಿಸಲು ಸ್ಥಳಾವಕಾಶ ಮಾಡಿಕೊಡಲಾಗುವುದು ಎಂದು ಶಾಸಕರು ಹೇಳಿದರು.

ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ, ಸದಸ್ಯರಾದ ನಾಗೇಶ್, ಕುಮಾರ್, ರಾಜಗೋಪಾಲ, ಶಶಿಧರ(ದೀಪು), ಮಹದೇವಮ್ಮ, ನಿರ್ಮಲಾ, ಭಾಗ್ಯಲಕ್ಷ್ಮೀ, ಅನ್ನಪೂರ್ಣ, ಶ್ರೀನಿವಾಸ, ಇಂಜಿನಿಯರ್ ಮಂಜುನಾಥ್, ಬಿಲ್‌ಕಲೆಕ್ಟರ್ ಪುಟ್ಟಸ್ವಾಮಿ ಇತರರು ಇದ್ದರು.