ಜಿಲ್ಲೆ

ಸ್ವಚ್ಛತೆ ಕಾಯ್ದುಕೊಳ್ಳದ ಹೋಟೆಲ್‌ಗಳಿಗೆ ಎಚ್ಚರಿಕೆ

Chamarajanagar

ಗುಂಡ್ಲುಪೇಟೆ: ಕರೊನಾ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧ ಹೋಟೆಲ್‌ಗಳಿಗೆ ಭೇಟಿ ನೀಡಿದ ತಹಸೀಲ್ದಾರ್ ಶುಚಿತ್ವ ನಿರ್ವಹಣೆ ಬಗ್ಗೆ ಪರಿಶೀಲಿಸಿ ಸ್ವಚ್ಛತೆಯಿಲ್ಲದ ಹೋಟೆಲ್‌ಗಳಿಗೆ ಎಚ್ಚರಿಕೆ ನೀಡಿದರು.

ಶುಕ್ರವಾರ ಬೆಳಗ್ಗೆ ತಹಸೀಲ್ದಾರ್ ನಂಜುಂಡಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾ.ಸೋಮಣ್ಣ, ನೋಡಲ್ ಅಧಿಕಾರಿ ರವಿಕುಮಾರ್ ಜತೆಗೂಡಿ ದಿಢೀರನೆ ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಹೋಟೆಲ್ ಹಾಗೂ ಹೊರರಾಜ್ಯಗಳ ಬಸ್ಸುಗಳು ನಿಲ್ಲುವ ಹೋಟೆಲ್‌ಗೆ ಭೇಟಿ ನೀಡಿ ಅಡುಗೆ ಮನೆ ಹಾಗೂ ಗ್ರಾಹಕರಿಗೆ ಸರಬರಾಜು ಮಾಡುವ ಆಹಾರ ಪದಾರ್ಥಗಳನ್ನು ಪರಿಶೀಲಿಸಿದರು.

ಅಡುಗೆ ಮನೆ ಸ್ವಚ್ಛತೆ ಇಲ್ಲದ ಹೋಟೆಲ್‌ಗಳಿಗೆ ಎಚ್ಚರಿಕೆ ನೀಡಿ ಮಾತನಾಡಿದ ನಂಜುಂಡಯ್ಯ, ಎಲ್ಲ ಗ್ರಾಹಕರಿಗೂ ಕುಡಿಯಲು ಶುದ್ಧ ಹಾಗೂ ಬಿಸಿನೀರು ಸರಬರಾಜು ಮಾಡಬೇಕು. ಕೈ ತೊಳೆಯಲು ನಂಜುನಿರೋಧಕ ದ್ರಾವಣ ಸರಬರಾಜು ಮಾಡಬೇಕು. ತಾಜಾ ಆಹಾರ ಪದಾರ್ಥಗಳನ್ನು ಮಾತ್ರ ಸರಬರಾಜು ಮಾಡಬೇಕು. ವಿದೇಶಿ ಪ್ರಜೆಗಳು ಹಾಗೂ ಶಂಕಿತರು ಕಂಡುಬಂದರೆ ಕೂಡಲೇ ಗಮನಕ್ಕೆ ತರಬೇಕು ಎಂದು ಸೂಚನೆ ನೀಡಿದರು.

ನಂತರ ಸಾರಿಗೆ ಬಸ್ ನಿಲ್ದಾಣದಲ್ಲಿ ಸಿಬ್ಬಂದಿಯಿಂದ ಮಾಹಿತಿ ಪಡೆದರು. ತಾಲೂಕು ಎರಡು ರಾಜ್ಯಗಳ ನಡುವೆಯಿರುವುದರಿಂದ ಪ್ರತಿನಿತ್ಯ ನೂರಾರು ಪ್ರಯಾಣಿಕರು ಆಗಮಿಸುತ್ತಲೇ ಇದ್ದಾರೆ. ಆದ್ದರಿಂದ ಬಸ್ ಸಂಚಾರ ಕಡಿಮೆ ಮಾಡುವ ಮೂಲಕ ನಿಯಂತ್ರಿಸಬೇಕು ಎಂದು ಮನವಿ ಮಾಡಿದರು. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರುವುದಾಗಿ ನಂಜುಂಡಯ್ಯ ಹೇಳಿದರು.

ತಹಸೀಲ್ದಾರ್ ಗರಂ: ಕರೊನಾ ಭೀತಿ ಹಿನ್ನೆಲೆಯಲ್ಲಿ ಹೆಚ್ಚು ಜನರು ಸೇರುವುದನ್ನು ತಪ್ಪಿಸಲು ಜಿಲ್ಲಾಡಳಿತ ಕ್ರಮಕೈಗೊಂಡಿದ್ದರೂ ತಾಲೂಕು ಕಚೇರಿಯ ಆವರಣದ ಸಬ್ ರಿಜಿಸ್ಟ್ರಾರ್ ಕಚೇರಿ ಎದುರು ನೂರಾರು ಜನ ಸೇರಿರುವುದನ್ನು ಕಂಡು ತಹಸೀಲ್ದಾರ್ ಗರಂ ಆದರು. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸುವವರಿಗೆ ಮುಂಗಡವಾಗಿ ಟೋಕನ್ ನೀಡಲಾಗುತ್ತಿದೆ. ಆದರೂ ನೂರಾರು ಜನರು ಕಚೇರಿ ಎದುರು ಜಮಾಯಿಸಿದ್ದರೂ ಯಾವುದೇ ಕ್ರಮಕೈಗೊಳ್ಳದ ಬಗ್ಗೆ ಸಬ್ ರಿಜಿಸ್ಟ್ರಾರ್ ರವಿ ಅವರನ್ನು ತಹಸೀಲ್ದಾರ್ ನಂಜುಂಡಯ್ಯ ತರಾಟೆಗೆ ತೆಗೆದುಕೊಂಡರು. ಜಿಲ್ಲಾಡಳಿತದ ಆದೇಶದಂತೆ ಕಾರ್ಯನಿರ್ವಹಿಸಬೇಕು. ಕೂಡಲೇ ಟೋಕನ್ ಇಲ್ಲದವರನ್ನು ಹೊರಗೆ ಕಳುಹಿಸಿ ಎಂದು ಸೂಚಿಸಿದರು.